ಕಾಸರಗೋಡು: ಲಾಕ್ ಡೌನ್ ಆದೇಶದ ಹಿನ್ನೆಲೆಯಲ್ಲಿ ಡಯಾಲಿಸಿಸ್ ನಡೆಸುವ ನಿಟ್ಟಿನಲ್ಲಿ ಮಂಗಳೂರು, ಕಣ್ಣೂರು ಪ್ರದೇಶಗಳ ಆಸ್ಪತ್ರೆಗಳಿಗೆ ತೆರಳಲಾಗದೇ ಇರುವ ರೋಗಿಗಳಿಗಾಗಿ ಕಾಸರಗೋಡು ಜಿಲ್ಲೆಯ ಮೂರು ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೌಲಭ್ಯ ಏರ್ಪಡಿಸಲಾಗಿದೆ. ಕಾಸರಗೋಡು ಜನರಲ್ ಆಸ್ಪತ್ರೆ, ಕಾಞಂಗಾಡ್ ಜಿಲ್ಲಾ ಸರ್ಕಾರಿ ಆಸ್ಪತ್ರೆ, ತ್ರಿಕರಿಪುರ ತಾಲೂಕು ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಏರ್ಪಡಿಸಲಾಗಿದೆ. ಈ ಆಸ್ಪತ್ರೆಗಳಲ್ಲಿ 2 ಶಿಫ್ಟ್ ಗಳಲ್ಲದೆ, ಹೆಚ್ಚುವರಿ ಒಂದು ಶಿಫ್ಟ್ ಏರ್ಪಡಿಸಲಾಗಿದೆ. ಇದು ನೂತನವಾಗಿ ಇಲ್ಲಿಗೆ ಆಗಮಿಸುವವರಿಗಾಗಿ ಮೀಸಲಿರಿಸಲಾಗಿದೆ. ಶಿಫ್ಟ್ ಒಂದರಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆ ಮತ್ತು ಕಾಞಂಗಾಡ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ತಲಾ 8 ಮಂದಿಗೆ, ತ್ರಿಕರಿಪುರ ಆಸ್ಪತ್ರೆಯಲ್ಲಿ 5 ಮಂದಿಗೆ ಅವಾಶ ಲಭ್ಯವಾಗಲಿದೆ. ಆಸ್ಪತ್ರೆಗಳ ಡಯಾಲಿಸೀಸ್ ಯೂನಿಟ್‍ಗಳ ಸಿಬ್ಬಂದಿಯಲ್ಲದೆ, ತಾಂತ್ರಿಕ ಪರಿಣತಿಯಿರುವ ಸ್ವಯಂ ಸೇವಕರ ಸೇವೆಯೂ ಇಲ್ಲಿ ಲಭ್ಯವಾಗಲಿದೆ. ಡಯಾಲಿಸಿಸ್ ಅಗತ್ಯವಿರುವವರು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ)ಕಚೇರಿ ಯ ನಿಯಂತ್ರಣ ಘಟಕವನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಮೊಬೈಲ್ ಅಂಗಡಿ, ವರ್ಕ್‍ಶಾಪ್ ಕಾರ್ಯಾಚರಣೆ:
ಜಿಲ್ಲೆಯಲ್ಲಿ ಮೊಬೈಲ್ ಅಂಗಡಿಗಳು ಭಾನುವಾರ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ತೆರೆದುಕಾರ್ಯಾಚರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ. ವರ್ಕ್ ಶಾಪ್‍ಗಳು ವಾರಕ್ಕೆ 2 ದಿನ ತೆರೆದು ಕಾರ್ಯಾಚರಿಸಲಿದೆ. ಭಾನುವಾರ ಮತ್ತು ಗುರುವಾರ ಬೆಳಗ್ಗೆ 11ರಿಂದ ಸಂಜೆ 5 ಗಂಟೆವರೆಗೆ ಇವು ಕಾರ್ಯಾಚರಿಸಲಿದ್ದು, ಸ್ಪೇರ್ ಪಾಟ್ರ್ಸ್ ಅಂಗಡಿಗಳೂ ಆ ದಿನಗಳಲ್ಲಿ ತೆರೆದು ಕಾರ್ಯಾಚರಿಸಲು ಮಂಜೂರಾತಿ ನೀಡಲಾಗುವುದು. ಫ್ಯಾನ್, ಏರ್ ಕಂಡೀಷನರ್ ಇತ್ಯಾದಿ ಖರೀದಿಗೆ ವಾರದಲ್ಲಿ ಒಂದು ದಿನ ಸಂಬಂಧಿತ ಅಂಗಡಿಗಳು ತೆರೆಯುವವಿಚಾರ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೂಚನೆ ನೀಡಿದ್ದಾರೆ. ನೋಂದಣಿ ಹೊಂದಿರುವ ಇಲೆಕ್ಟ್ರೀಶಿಯನ್‍ಗಳು ಮನೆಗಳಿಗೆ ತೆರಳಿ ದುರಸ್ತಿ ಕಾಮಗಾರಿ ನಡೆಸಲು ಅಭ್ಯಂತರವಿಲ್ಲ. ಫ್ಲಾಟ್‍ಗಳಲ್ಲಿ ಕೇಂದ್ರೀಕೃತ ಸೌಲಭ್ಯಗಳಿದ್ದು, ಅಲ್ಲಿ ದುರಸ್ತಿಗೆ ಅನುಮತಿ ನೀಡಲಾಗುವುದು ಎಂದು ತಿಳಿಸಿದರು.

