ಬದಿಯಡ್ಕ: ಉಕ್ಕಿನಡ್ಕದಲ್ಲಿ ನಿರ್ಮಾಣಪೂರ್ತಿಗೊಂಡು ಉದ್ಘಾಟನೆಗೆ ಮೊದಲೇ ಕೋವಿಡ್ ಆಸ್ಪತ್ರೆಯಾಗಿ ಘೋಶಿಸಲ್ಪಟ್ಟ ಕಾಸರಗೋಡು ವೈದ್ಯಕೀಯ ಕಾಲೇಜಿಗೆ 273 ಉದ್ಯೋಗಾರ್ಥಿಗಳ ತುರ್ತು ನೇಮಕಾತಿಗೆ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಕೋವಿಡ್ 19 ಚಿಕಿತ್ಸಾ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿರುವ ಈ ವೈದ್ಯಕೀಯ ಕಾಲೇಜಿನ ಆರಂಭಿಕ ಹಂತದ 50 ಶೇ. ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ಒಂದು ವರ್ಷದೊಳಗೆ ಎಲ್ಲಾ ಹುದ್ದೆಗಳೂ ಭರ್ತಿಯಾಗಲಿದೆ. ಬಳಿಕ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ ಎಮದು ಸರ್ಕಾರ ತಿಳಿಸಿದೆ.
ಪ್ರಸ್ತುತ ಆಡಳಿತಾತ್ಮಕ, ಅರೆ ವೈದ್ಯಕೀಯ, ಶೂಶ್ರೂಶಕ(ನರ್ಸಿಂಗ್) ಸಿಬ್ಬಂದಿಗಳ ವಿಭಾಗದಲ್ಲಿ 182 ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ. ಬೋಧಕೇತರ ವರ್ಗದ ವೇತನ ಶ್ರೇಣಿ ಕನಿಷ್ಠ 9,340 ರಿಂದ 83 ಸಾವಿರ ರೂ. ವರೆಗೂ ಇರಲಿದೆ. ಬೋಧಕ ವರ್ಗದಲ್ಲಿ 91 ಹುದ್ದೆಗಳನ್ನು ನೇಮಕಮಾಡಲಾಗುತ್ತದೆ. ಬೋಧಕ ವರ್ಗದ ವೇತನ ಶ್ರೇಣಿ ಕನಿಷ್ಠ 15,600 ರಿಂದ ಗರಿಷ್ಠ 70 ಸಾವಿರ ರೂ. ಇರಲಿದೆ.
ರಾಜ್ಯಪಾಲರ ಆದೇಶದ ಮೇರೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಜನ್ ನಾಮ್‍ದೇವ್ ಖೋಬ್ರಗಡೆ ಅವರ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.


