ಕಾಸರಗೋಡು: ಕಾಸರಗೋಡು ಜಿಲ್ಲೆಯ ಇಂದಿನ ದುಸ್ಥಿತಿಗೆ ಕಾರಣರಾದ ಕೇರಳವನ್ನು ಆಳಿದ ಎಡ ಹಾಗೂ ಐಕ್ಯರಂಗ ಸರ್ಕಾರಗಳು, ಕಾಸರಗೋಡಿನ ಸಂಸದರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ತಮ್ಮ ವೈಫಲ್ಯವನ್ನು ಮರೆ ಮಾಚಲು ಕನಾ9ಟಕ ಗಡಿಯನ್ನು ಮುಚ್ಚಿದ ಹೆಸರಿನಲ್ಲಿ ಕರ್ನಾಟಕ ಸರ್ಕಾರ ಮತ್ತು ಬಿಜೆಪಿಯನ್ನು ದೂಷಿಸುತ್ತಿದ್ದಾರೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ವಿಭಾಗದ ರೋಗಿಗಳಿಗೆ ಮಂಗಳೂರು ಪ್ರಯಾಣವನ್ನು ನಿಬರ್ಂಧಿಸುವುದನ್ನು ಸಮರ್ಥಿಸುತ್ತಿಲ್ಲ. ಆದರೆ ಅದರ ನೆಪದಲ್ಲಿ ಬಿಜೆಪಿಗೆ ಕಳಂಕ ತರುವ ಯುಡಿಎಫ್-ಎಲ್‍ಡಿಎಫ್ ನಾಯಕರ ವಿಫಲ ಪ್ರಯತ್ನ. ಇದು ಅವರಿಗೆ ಭೂಷಣವಲ್ಲವೆಂದು ಶ್ರೀಕಾಂತ್ ಹೇಳಿದ್ದಾರೆ.
ಕಾಸರಗೋಡು ಜಿಲ್ಲೆಯ ಅಭಿವೃದ್ಧಿ ಹಿಂದುಳಿದಿರುವಿಕೆ ಈಗ ಸಂಪೂರ್ಣವಾಗಿ ಬಹಿರಂಗಗೊಂಡಿದೆ. ಜಿಲ್ಲೆಯ ಆರೋಗ್ಯ ಕ್ಷೇತ್ರ ಸೇರಿದಂತೆ ಜಿಲ್ಲೆ ಹಿಂದುಳಿಯಲು ಕಾರಣ ರಾಜ್ಯವನ್ನು ಅದಲು ಬದಲಾಗಿ ಕೇರಳವನ್ನು ಆಳಿದ ಎಡ ಮತ್ತು ಐಕ್ಯ ರಂಗದ ಆಡಳಿತ ವೈಫಲ್ಯವೇ ಕಾರಣವಾಗಿದೆ. ಜಿಲ್ಲೆಯಲ್ಲೊಂದು ವೈದ್ಯಕೀಯ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರಯಾಗಲಿ ಇಲ್ಲ. ಯಾರಾದರೂ ಇದನ್ನು ಆರಂಭಿಸಲು ಪ್ರಯತ್ನ ಮಾಡಿದರೆ ಅದಕ್ಕೆ ಅಡ್ಡಗಾಲುಹಾಕಿದವರು ಈಗ ಕರ್ನಾಟಕವನ್ನು ದೂಷಿಸುತ್ತಿದ್ದಾರೆ ಎಂದು
ಅವರು ಹೇಳಿದರು. ಪ್ರಸ್ತುತ ಬಿಕ್ಕಟ್ಟಿನ ಬಗ್ಗೆ ಜಿಲ್ಲೆಯ ಮುಸ್ಲಿಂ ಲೀಗ್ ಶಾಸಕರು ಮತ್ತು ಕಾಂಗ್ರೆಸಿನ ಲೋಕಸಭಾ ಸದಸ್ಯರು ಎಲ್ ಡಿ ಎಫ್ ಸರ್ಕಾರದ ವೈಫಲ್ಯದ ಬಗ್ಗೆ ಮೌನ ವಹಿಸಿದ್ದಾರೆ. ಎಲ್ ಡಿಎಫ್-ಯುಡಿಎಫ್ ನ ಮಧ್ಯೆಯಿರುವ ಒಳ ಒಪ್ಪಂದ ಇದಕ್ಕೆ ಕಾರಣವೆಂದು ಬಿಜೆಪಿ ಆರೋಪಿಸಿದೆ.
ಜಿಲ್ಲೆಯ ಚಿಕಿತ್ಸಾ ಸೌಲಭ್ಯಗಳನ್ನು ಸುಧಾರಿಸಲು ಕೇರಳದ ರಾಜ್ಯಸಭಾ ಸದಸ್ಯರುಗಳ ಫಂಡ್ ಇಲ್ಲಿಗೆ ದೂರಕಿಸಬೇಕು. ಜಿಲ್ಲೆಯ ಎರಡೂ ರಂಗಗಳ ನೇತಾರರು ಇದಕ್ಕೆ ಒತ್ತಡ ಹೇರಬೇಕು. ಎರಡೂ ಪಕ್ಷಗಳ ನಾಯಕರು ಬಿಜೆಪಿಯ ವಿರುದ್ಧ ಅಪಪ್ರಚಾರ ಮಾಡುವ ಬದಲು ಈ ಬಗ್ಗೆ ಪ್ರಯತ್ನಿಸಬೇಕು. ಸಮರ್ಪಕ ವೈದ್ಯಕೀಯ ಸೌಲಭ್ಯ ಹೊಂದಿರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ಪ್ರಧಾನಿ ಆಯುಷ್ಮಾನ್ ಭಾರತ್ ಮತ್ತು ಕಾರುಣ್ಯ ಯೋಜನೆಯಲ್ಲಿ ಸೇರಿಸಬೇಕು. ಜಿಲ್ಲೆಯ ಬಿಕ್ಕಟ್ಟನ್ನು ನಿವಾರಿಸಲು ಎಲ್ಲಾ ರಾಜಕೀಯ ಮುಖಂಡರು ಮತ್ತು ಜನಪ್ರತಿನಿಧಿಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.


