ಕಾಸರಗೋಡು: ಕೋವಿಡ್ 19 ರೋಗ ನಿರ್ಣಯ ಸಲುವಾಗಿ ಗಂಟಲ ರಸ ತಪಾಸಣೆ ನಡೆಸುವುತ್ತಿರುವುದರ ಸಂಬಂಧ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಪ್ರಕಟಗೊಳ್ಳುತ್ತಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ರಾಜ್ಯ ಸರಕಾರ ಮತ್ತು ಆರೋಗ್ಯ ಇಲಾಖೆಯ ಆದೇಶ ಪ್ರಕಾರ ರೋಗ ಲಕ್ಷಣ ಪ್ರಕಟವಾಗುತ್ತಿರುವ ವ್ಯಕ್ತಿಗಳಿಂದ, ರೋಗಿಗಳೊಂದಿಗೆ ಸಂಪರ್ಕ ಹೊಂದಿದವರು, ಇತರ ರಾಜ್ಯಗಳಿಂದ, ವಿದೇಶಗಳಿಂದ ಬರುತ್ತಿರುವ ಗರ್ಭಿಣಿಯರ ಗಂಟಲ ರಸ ಸಂಗ್ರಹಿಸಿ ಆಯತೆಯೊಂದಿಗೆ ತಪಾಸಣೆಗೆ ಕಳುಹಸಲಾಗುತ್ತಿದೆ. ಸಾಮಾಜಿಕ ಹರಡುವಿಕೆ ಪ್ರತಿರೋಧ ನಡೆಸುವ ಚಟುವಟಿಕೆಗಳ ಅಂಗವಾಗಿ ಜಿಲ್ಲೆಯ ವಿವಿಧ ಭಾಗಗಳಿಂದ ಮತ್ತು ಸೆಟಿನಲ್ ಸರ್ವೇ ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಗುತ್ತಿದೆ.
ದಿನವೊಂದಕ್ಕೆ ಸರಾಸರಿ 250ಕ್ಕೂ ಅಧಿಕ ಗಂಟಲರಸ ತಪಾಸಣೆಗೆ ಕಳುಹಲಾಗುತ್ತಿದೆ. ಪೆರಿಯ ಕೇಂದ್ರೀಯ ವಿವಿ ಪ್ರಯೋಗಾಲಯದಲ್ಲಿ ಸ್ಯಾಂಪಲ್ ತಪಾಸಣೆ ನಡೆಸಲಾಗುತ್ತಿದೆ. ಈ ತಪಾಸಣೆಗೆ ಕನಿಷ್ಠ ಮೂರು ದಿನಗಳ ಕಾಲಾವಕಾಶ ಬೇಕಿದೆ. ಇಲ್ಲಿ ಲಭಿಸುವ ಫಲಿತಾಂಶವನ್ನು ರಾಜ್ಯ ಕೊರೋನಾ ಕಂಟ್ರೋಲ್ ಸೆಲ್ ಗೆ ಕಳುಹಸಲಾಗುತ್ತಿದೆ. ರಾಜ್ಯ ಮಟ್ಟದ ತಪಾಸಣೆಯ ನಂತರವಷ್ಟೇ ಜಿಲ್ಲಾ ವೈದ್ಯಾಧಿಕಾರಿ ಅಧಿಕೃತವಾಗಿ ಜಿಲ್ಲಾ ಮಟ್ಟದ ವರದಿ ಪ್ರಕಟಿಸುತ್ತಾರೆ. ಜಿಲ್ಲಾ ಕೊರೋನಾ ಕಂಟ್ರೋಲ್ ಸೆಲ್ ನಿಂದ ಯಾ ಜಿಲ್ಲೆಯ ಇತರ ಆರೋಗ್ಯ ಸಂಸ್ಥೆಗಳಿಂದ ಮಾತ್ರ ಈ ತಪಾಸಣೆ ಫಲಿತಾಂಶ ಲಭಿಸುವುದು. ಇದಲ್ಲದೆ ಗಂಟಲ ರಸ ತಪಾಸಣೆ ನಡೆಸಿರುವ ವ್ಯಕ್ತಿಗೆ ಮಾನಸಿಕ ಗೊಂದಲ ಉಂಟುಮಾಡುವ ರೀತಿಯ ತಪಾಸಣೆಯ ಫಲಿತಾಂಶ ಕುರಿತು ಪ್ರಚಾರ ನಡೆಸುವುದು ಗಂಭೀರ ಅಪರಾಧ ವಾಗಿದೆ. ಇಂಥಾ ಅಕ್ರಮ ಚಟುವಟಿಕೆಗಳು, ಹುಸಿ ಸುದ್ದಿ ಗಮನಕ್ಕೆ ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿರುವರು.





