ಕಾಸರಗೋಡು : ಮುಳಿಯಾರಿನಲ್ಲಿ ನಿರ್ಮಿಸಲಾಗುವ ಎಂಡೋಸಲ್ಫಾನ್ ಪುನರ್ ವಸತಿ ಗ್ರಾಮದ ಪ್ರಥಮ ಹಂತದ ಕಾಮಗಾರಿ 10 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ತಿಳಿಸಿದರು.
ವೀಡಿಯೋ ಕಾನ್ಫೆ ರೆನ್ಸ್ ಮೂಲಕ ಎಂಡೋಸಲ್ಫಾನ್ ಪುನರ್ ವಸತಿ ಗ್ರಾಮದ ಶಿಲಾನ್ಯಾಸವನ್ನು ಶನಿವಾರ ನಡೆಸಿ ಅವರು ಮಾತನಾಡಿದರು.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ಪುನರ್ ವಸತಿ ಗ್ರಾಮದ ಪ್ರಾಥಮಿಕ ಹಂತದ ಕಾಮಗಾರಿ ಪೂರ್ಣಗೊಳಿಸಲಾಗುವುದು. ಈ ನಿಟ್ಟಿನಲ್ಲಿ 5 ಕೋಟಿ ರೂ. ಮೀಸಲಿರಿಸಲಾಗಿದೆ. ಜಗತ್ತಿನ ಸುಮಾರು 24 ಪುನರ್ವಸತಿ ಮಾದರಿಗಳನ್ನು ಅಭ್ಯಸಿಸಿ, ಪರಿಣತರ ಮತ್ತು ಸ್ಥಳೀಯ ಮಟ್ಟದ ಪರಿಣತರ ಅಭಿಮತ ಸಂಗ್ರಹಿಸಿ ಪುನರ್ ವಸತಿ ಗ್ರಾಮದ ಮಾಸ್ಟರ್ ಪ್ಲಾನ್ ಸಿದ್ಧಗೊಳಿಸಲಾಗಿದೆ. ಈ ಹಿನ್ನೆಲೆಯಿಂದ ಜಗತ್ತಿಗೇ ಮಾದರಿಯಾಗಬಲ್ಲ ಪುನರ್ ನಿವಾಸ ಗ್ರಾಮ ಅಭಿವೃದ್ಧಿ ಪಡಿಸುವುದು ಯೋಜನೆಯ ಉದ್ದೇಶ. ಇದಕ್ಕಾಗಿ ಮುಳಿಯಾರು ಗ್ರಾಮಪಂಚಾಯತ್ ನ 25 ಎಕ್ರೆ ಜಾಗ ವಹಿಸಿಕೊಳ್ಳಲಾಗಿದೆ ಎಂದರು.
ಸಂತ್ರಸ್ತರ ವಿಶೇಷಚೇತನತೆಯನ್ನು ಮೊದಲ ಹಂತದಲ್ಲೇ ಪತ್ತೆಮಾಡುವ, ಅವರಿಗೆ ಸಂರಕ್ಷಣೆ ಒದಗಿಸುವ, ವೈಜ್ಞಾನಿಕ ಪರಿಚರಣೆ ಒದಗಿಸುವ, 18 ವರ್ಷಕ್ಕಿಂತ ಅಧಿಕ ವಯೋಮಾನದವರಿಗೆ ಪುನರ್ ವಸತಿ ಖಚಿತಪಡಿಸುವ, ಸ್ವಂತ ಮನೆಯದೇ ವಾತಾವರಣ ಖಚಿತಪಡಿಸುವ ಈ 5 ಅಂಶಗಳಿಗೆ ಯೋಜನೆಯಲ್ಲಿ ಆದ್ಯತೆ ನೀಡಲಾಗುವುದು. ಈ ನಿಟ್ಟಿಲ್ಲಿ 72 ಕೋಟಿ ರೂ. ವೆಚ್ಚಮಾಡಲಾಗುವುದು. ಯೋಜನೆ ಪೂರ್ಣಗೊಳ್ಳುವ ವೇಳೆ ಬೃಹತ್ ದೌತ್ಯವೊಂದು ಪೂರ್ಣಗೊಳ್ಳಲಿದೆ. ರಾಜ್ಯ ಸರಕಾರದ ದೊಡ್ಡ ಕನಸಿನ ಯೋಜನೆಗಳಲ್ಲಿ ಒಂದಾಗಿರುವ ಈ ಯೋಜನೆಯ ಅನುಷ್ಠಾನಕ್ಕೆ ಎಲ್ಲರ ಬೆಂಬಲ ಅನಿವಾರ್ಯ ಎಂದು ಸಚಿವೆ ತಿಳಿಸಿದರು.
285 ಕೋಟಿ ರೂ. ಆರ್ಥಿಕ ಸಹಾಯ ವಿತರಣೆ: ಕಂದಾಯ ಸಚಿವ:
ರಾಜ್ಯ ಸರಕಾರ ಎಂಡೋಸಲ್ಫಾನ್ ಸಂತ್ರಸ್ತರಿಗೆ ಈ ವರೆಗೆ 285 ಕೋಟಿ ರೂ. ಆರ್ಥಿಕ ಸಹಾಯ ವಿತರಣೆ ನಡೆಸಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.
ಬೋವಿಕ್ಕಾನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುನರ್ ವಸತಿ ಗ್ರಾಮದ ಶಿಲಾನ್ಯಾಸ ಸಂಬಂಧ ಶನಿವಾರ ನಡೆದ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಂಡೋಸಲ್ಫಾನ್ ಪೀಡಿತ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳ ಅಭೀವೃದ್ಧಿಗಾಗಿ ನಬಾರ್ಡ್ ನ ಸಹಾಯದೊಂದಿಗೆ 200 ಕೊಟಿ ರೂ. ವೆಚ್ಚ ಮಾಡಲಾಗಿದೆ. ಸಂತ್ರಸ್ತರ ಕಣ್ಣೀರೊರೆಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಗರಿಷ್ಠ ಮಟ್ಟದಲ್ಲಿ ಯತ್ನಿಸುತ್ತಿದೆ ಎಂದವರು ನುಡಿದರು.
ಶಾಸಕ ಕೆ.ಕುಂಞÂ್ಞ ರಾಮನ್ ಪ್ರಧಾನ ಭಾಷಣಮಾಡಿದರು. ಕಾರಡ್ಕ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಓಮನಾ ರಾಮಚಂದ್ರನ್, ಮುಳಿಯಾರು ಗ್ರಾಮಪಂಚಾಯತ್ ಅಧ್ಯಕ್ಷ ಖಾಲಿದ್ ಬೆಳ್ಳಿಪ್ಪಾಡಿ, ಜಿಲ್ಲಾ ಪಂಚಾಯತ್ ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷೆ ನ್ಯಾಯವಾದಿ ಎ.ಪಿ.ಉಷಾ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ವಾಗತಿಸಿದರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ವರದಿ ವಾಚಿಸಿದರು. ಜಿಲ್ಲಾ ಸಮಾಜ ನೀತಿ ಅಧಿಕಾರಿ ಜೋಸೆಫ್ ರೆಬೆಲ್ಲೋ ವಂದಿಸಿದರು.





