ಕಾಸರಗೋಡು: ರಾಜ್ಯ ಸರ್ಕಾರ ಎಂಡೋಸಲ್ಫಾನ್ ಸಂತ್ರಸ್ತರ ಸಮಗ್ರ ಅಭೀವೃದ್ಧಿಯ ಗುರಿ ಹೊಂದಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಅಭಿಪ್ರಾಯಪಟ್ಟರು.
ಎಣ್ಮಕಜೆ ಬಡ್ಸ್ ಶಾಲೆಯ ನೂತನಕಟ್ಟಡ ನಿರ್ಮಾಣ ಸಂಬಂಧ ಸಮಾರಂಭವನ್ನು ವೀಡಿಯೋ ಕಾನ್ ಫೆರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಎಣ್ಮಕಜೆ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಶನಿವಾರ ಸಮಾರಂಭ ಜರುಗಿತು.
ಎಂಡೋ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರಕಾರ ವಿವಿಧ ಕ್ರಿಯಾ ಯೋಜನೆ ರಚಿಸಿ ಜಾರಿಗೊಳಿಸುತ್ತಿದೆ.
ಯೋಜನೆಗೆ ಪೂರಕವಾದ ಜಾಗ ಲಭಿಸದೇ ಇದ್ದ ಕಾರಣ ನಬಾರ್ಡ್-ಆರ್.ಐ.ಡಿ.ಎಫ್. ಯೋಜನೆಯಿಂದ ಹೊರತುಗೊಂಡಿದ್ದ ಎಣ್ಮಕಜೆ ಬಡ್ಸ್ ಶಾಲೆಯ ನೂತನ ಕಟ್ಟಡ ನಿರ್ಮಾಣ ಯೋಜನೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ಜಾರಿಗೊಳಿಸಲಾಗುತ್ತಿದೆ ಎಂದವರು ತಿಳಿಸಿದರು.
ರಾಜ್ಯ ಸರಕಾರ ಸದಾ ಎಂಡೋಸಲ್ಫಾನ್ ಸಂತ್ರಸ್ತರ ಜೊತೆಗಿದೆ: ಕಂದಾಯ ಸಚಿವ:
ರಾಜ್ಯ ಸರ್ಕಾರ ಸದಾ ಎಂಡೋಸಲ್ಫಾನ್ ಸಂತ್ರಸ್ತರ ಜೊತೆಗಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.
ಎಣ್ಮಕಜೆ ಬಡ್ಸ್ ಶಾಲೆಯ ನೂತನಕಟ್ಟಡ ನಿರ್ಮಾಣ ಸಂಬಂಧ ಎಣ್ಮಕಜೆ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಶಿಲಾನ್ಯಾಸ ನಡೆಸಿ ಅವರು ಮಾತನಾಡಿದರು.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ 2 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಪೂರ್ಣಗೊಳಿಸಲಾಗುವುದು. ಸಂತ್ರಸ್ತರ ಕಲ್ಯಾಣ ಖಚಿತಪಡಿಸುವುದು ರಜ್ಯ ಸರ್ಕಾರದ ಹೊಣೆಯಾಗಿದೆ. ಈ ಬಡ್ಸ್ ಶಾಲೆ ಅನುಷ್ಠಾನಗೊಳ್ಳುವ ಮೂಲಕ ಸ್ಥಳೀಯ 53 ಸಂತ್ರಸ್ತ ಮಕ್ಕಳಿಗೆ ಸಹಕಾರಿಯಾಗಲಿದೆ ಎಂದವರು ತಿಳಿಸಿದರು.
ಶಾಸಕ ಎಂ.ಸಿ.ಕಮರುದ್ದೀನ್ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಗ್ರಾಮಪಂಚಾಯತ್ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದೀಕ್, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಜಯಶ್ರೀ ಎ. ಕುಲಾಲ್, ಆರೋಗ್ಯ-ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಎ.ಎ.ಆಯಿಷಾ, ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಾವತಿ, ವಾರ್ಡ್ ಸದಸ್ಯ ಹನೀಫ್ ನಡುಬೈಲ್, ಕಾಸರಗೋಡು ಅಭಿವೃಧ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿಇ.ಪಿ.ರಾಜ್ ಮೋಹನ್ ಉಪಸ್ಥಿತರಿದ್ದರು. ಪಂಚಾಯತ್ ಅಧ್ಯಕ್ಷೆ ವೈ.ಶಾರದಾ ಸ್ವಾಗತಿಸಿದರು. ಸಹಾಯಕ ಕಾರ್ಯದರ್ಶಿ ವರ್ಗೀಸ್ ವಂದಿಸಿದರು.





