ಕಾಸರಗೋಡು: ನೆರೆ ಹಾವಳಿ ನಾಶನಷ್ಟ ಪರಿಹಾರ ರೂಪದಲ್ಲಿಮಂಜೂರುಗೊಂಡ ಯೋಜನೆ ಪೂರ್ಣತೆಗೆ 2021 ಮಾ.31 ವರೆಗೆ ಅವಧಿ ಮುಂದುವರಿಸಲಾಗಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.
ಕಾಞಂಗಾಡ್ ಬ್ಲಾಕ್ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಕಾಞಂಗಾಡ್ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಯೋಜನೆಗಳ ಅವಲೋಕನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಚಿವರು ಈ ಕ್ಷೇತ್ರದ ಶಾಸಕರೂ ಆಗಿದ್ದಾರೆ.
ಈ ವಿಭಾಗದಲ್ಲಿ ಸೇರಿದ ಯೋಜನೆಗಳನ್ನು ಒಂದೂವರೆ ವರ್ಷದ ಮುಂಚಿತವಾಗಿ ಪೂರ್ಣಗೊಳಿಸಲು ಕಡ್ಡಾಯವಿದೆ. ಆದರೆ ಇನ್ನೂ ಪೂರ್ಣಗೊಳಿಸದ ಮಂಜೂರುಗೊಂಡ ಎಲ್ಲ ಯೋಜನೆಗಳೂ 2021 ಮಾ.31 ರ ಮುಂಚಿತವಾಗಿ ಪೂರ್ತಿಗೊಳಿಸಬೇಕು ಎಂದು ಸಚಿವ ತಿಳಿಸಿದರು.
ಇಲಾಖೆಯ ಕೆಲವು ಸಿಬ್ಬಂದಿಯ ಉಡಾಫೆ ಮನೋಭಾವದಿಂದ ಅಭಿವೃದ್ಧಿ ಯೋಜನೆಗಳು ವಿಳಂಬವಾಗುತ್ತಿದ್ದು, ಅದನ್ನು ಯಾವ ಕಾಲಕ್ಕೂ ಸಹಿಸಲಾಗದು ಎಂದು ಸಚಿವ ಸ್ಪಷ್ಟಪಡಿಸಿದರು. ಅನೇಕ ವರ್ಷಗಳ ಹಿಂದೆಯೇ ಮಂಜೂರುಗೊಂಡ ಅನೇಕ ಯೋಜನೆಗಳು ಇನ್ನೂ ಆರಂಭಕ್ಕೆ ಬಾಕಿಯಿರುವುದು ಸಿಬ್ಬಂದಿಯ ಉದಾಸೀನತೆಯಿಂದ ಎಂದು ಆರೋಪಿಸಿದ ಸಚಿವ ಇದನ್ನು ಸಹಿಸಲಾಗದು. ಕಾಸರಗೋಡು ಜಿಲ್ಲೆಯ ಬಹುಪಾಲು ಸಿಬ್ಬಂದಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವವರು. ಆದರೆ ಬೆರಳೆಣಿಕೆಯ ಕೆಲವು ಸಿಬ್ಬಂದಿಯ ವಿಳಂಬನೀತಿಯಿಂದ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿದರು. ರಾಜ್ಯ ಸರಕಾರ ಜನಹಿತಕ್ಕಾಗಿ ನೇಕ ಅಭಿವೃದ್ಧಿ ಯೋಜನೆಗಳನ್ನು ರಚಿಸುತ್ತಿದೆ. ಶಾಸಕರ ನಿಧಿ, ಮುಂಗಡಪತ್ರ ಇತ್ಯಾದಿಗಳ ಮೂಲಕ ಈ ಯೋಜನೆಗಳಿಗೆ ನಿಧಿ ಮಂಜೂರು ಮಾಡುತ್ತಿದೆ. ಆದರೆ ಅವುಗಳ ಅನುಷ್ಠಾನದ ಬುಡಕ್ಕೆ ಬಿಲಕೊರೆಯುವ ಕೆಲವು ಸಿಬ್ಬಂದಿಗಳಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಹಣಕಾಸು ಅಧಿಕಾರಿ ಕೆ.ಸತೀಶನ್, ಎ.ಡಿ.ಸಿ.(ಜನರಲ್) ಬೆವಿನ್ ಜಾನ್ ವರ್ಗೀಸ್, ಲೋಕೋಪಯೋಗಿ ಇಲಾಖೆಯ ಕಾರ್ಯಕಾರಿ ಇಂಜಿನಿಯರ್ ವಿನೋದ್ ಕುಮಾರ್, ಲೋಕೋಪಯೋಗಿ ಕಟ್ಟಡ ವಿಭಾಗ ಇಂಜಿನಿಯರ್ ಮುಹಮ್ಮದ್ ಮುನೀರ್, ಕಾಞಂಗಾಡ್ ಬ್ಲೋಕ್ ಪಂಚಾಯತ್ ಎಂ.ಗೌರಿ, ಪರಪ್ಪ ಬ್ಲೋಕ್ ಪಂಚಾಯತ್ ಪಿ.ರಾಜನ್, ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್ ಎ.ವಿಧುಬಾಲ, ಪನತ್ತಡಿ ಗ್ರಾಮಪಂಚಾಯತ್ ಅಧ್ಯಕ್ಷ ಪಿ.ನೋಹನನ್, ಕೋಡೋಂ-ಬೇಳೂರು ಪಂಚಾಯತ್ ಅಧ್ಯಕ್ಷ ಸಿ.ಕುಂಞÂ ಕಣ್ಣನ್, ಅಜಾನೂರು ಗ್ರಾಮಪಂಚಾಯತ್ ಅಧ್ಯಕ್ಷ ಪಿ.ದಾಮೋದರನ್, ಮಡಿಕೈ ಗ್ರಾಮಪಂಚಾಯತ್ ಅಧ್ಯಕ್ಷ ಸಿ.ಪ್ರಭಾಕರನ್, ಸಚಿವರ ಖಾಸಗಿ ಸಹಾಯಕ ಕೆ.ಪದ್ಮನಾಭನ್ , ವಿವಿಧ ಇಲಾಖೆಗಳ ನಿರ್ವಹಣೆ ಅಧಿಕಾರಿಗಳು ಉಪಸ್ಥಿತರಿದ್ದರು.





