ಕಾಸರಗೋಡು: ಸುಭಿಕ್ಷ ಕೇರಳಂ ಯೋಜನೆಗೆ ಕಾಸರಗೋಡು ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ಲಭಿಸಿದೆ. ಯೋಜನೆ ಜಾರಿಗೊಂಡು ಒಂದೂವರೆ ತಿಂಗಳ ಅವಧಿಯಲ್ಲಿ ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 2800 ಎಕ್ರೆ ಜಾಗ ಯೋಜನೆ ಅನುಷ್ಠಾನಕ್ಕಾಗಿ ಲಭಿಸಿದೆ.
ರಾಜ್ಯ ಸರಕಾರ ಜಾರಿಗೊಳಿಸುತ್ತಿರುವ ಜನಪರ ಯೋಜನೆಗಳಲ್ಲಿ ಸುಭಿಕ್ಷ ಕೇರಳಂ ಕೂಡ ಒಂದಾಗಿದೆ. ಕೋವಿಡ್ ಪರಿಹಾರಗೊಂಡ ನಂತರದ ದಿನಗಳಲ್ಲಿ ಕೇರಳದಲ್ಲಿ ಆಹಾರ ಸುರಕ್ಷತೆ ಖಚಿತಪಡಿಸುವ ಉದ್ದೇಶವನ್ನುಈ ಯೋಜನೆ ಹೊಂದಿದೆ. ಬಂಜರು ಭೂಮಿಯನ್ನು ವೈಜ್ಞಾನಿಕ ರೀತಿ ಹದಗೊಳಿಸಿ ಕೃಷಿಯೋಗ್ಯ ವಾಗಿಸುವುದು ಇಲ್ಲಿನ ಪ್ರಧಾನ ಗುರಿ. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಸಾರ್ವಜನಿಕ ಸಹಭಾಗಿತ್ವ ಈ ಯೋಜನೆಯ ಯಶಸ್ಸಿನ ಗುಟ್ಟಾಗಿದೆ.
ಖಾಸಗಿ ವ್ಯಕ್ತಿಗಳು, ಸ್ವಯಂ ಸೇವಾ ಸಂಘನೆಗಳು, ರಾಜಕೀಯ ಪಕ್ಷಗಳು, ಗ್ರಾಮಪಂಚಾಯತ್ ಗಳು, ಸ್ಥಳೀಯಾಡಳಿತ ಸಂಸ್ಥೆಗಳು, ಕಂದಾಯ ವಿಭಾಗ ಮೊದಲಾದವರ ಸ್ವಾಮ್ಯದಲ್ಲಿರುವ ಬಂಜರು ಜಾಗವನ್ನು ಸುಭಿಕ್ಷ ಕೇರಳಂ ಯೋಜನೆಗಾಗಿ ವಹಿಸಿಕೊಳ್ಳಲಾಗುತ್ತಿದೆ.
ಈ ಯೋಜನೆಗಾಗಿ ಕೃಷಿ ನಡೆಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 2800 ಎಕ್ರೆ ಭೂಮಿ ಲಭಿಸಿದೆ ಎಂದು ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ತಿಳಿಸಿದರು. ಕಳೆದ 5 ವರ್ಷಗಳಿಂದ ಯಾವ ಕೃಷಿಯನ್ನೂ ನಡೆಸದೆ ಬಂಜರಾಗಿ ಉಳಿದಿದ್ದ ಜಾಗಗಳನ್ನು ಮಾತ್ರ ಸಧ್ಯದ ಮಟ್ಟಿಗೆ ಕೃಷಿಗಾಗಿ ಬಳಸಲಾಗುತ್ತಿದೆ. ಇತರ ಜಾಗಗಳಲ್ಲೂ ನಡೆಸಲಾಗುವ ಕೃಷಿಗೂ ಯೋಜನೆಯ ಬೆಂಬಲವಿದೆ ಎಂದವರು ತಿಳಿಸಿದರು.
ಬಂಜರು ಜಾಗದಲ್ಲಿ ಪೂರ್ಣರೂಪದಲ್ಲಿ ಕೃಷಿ ನಡೆಸುವುದು, ಉತ್ಪಾದನೆಯಲ್ಲಿ ಹೆಚ್ಚಳ ತರುವ ಮೂಲಕ ಕೃಷಿಕರಿಗೆ ಕೈತುಂಬ ಆದಾಯ ಒದಗುವಂತೆ ಮಾಡುವುದು, ಹೆಚ್ಚುವರಿ ನೌಕರಿ ಅವಕಾಶ ಸೃಷ್ಟಿಸುವುದು, ಯುವಜನತೆಯನ್ನು, ಆನಿವಾಸಿ ಮಂದಿಯನ್ನು ಕೃಷಿಯತ್ತ ಆಕರ್ಷಿಸುವಂತೆ ಮಾಡುವುದು, ಪಶುಸಂಗೋಪನೆ, ಮೀನುಗಾರಿಕೆ ವಲಯಗಳನ್ನು ಅಭಿವೃದ್ಧಿ ಪಡಿಸುವುದು ಇತ್ಯಾದಿ ಉದ್ದೇಶಗಳನ್ನು ಹೊಂದಿರುವ ಬೃಹತ್ ಯೋಜನೆ ಇದಾಗಿದೆ.
ಆಯಾ ಇಲಾಖೆಗಳ ಜಂಟಿ ಸಹಕಾರವೂ ಈ ನಿಟ್ಟಿನಲ್ಲಿದೆ. ಸ್ಥಳೀಯ ಮಟ್ಟದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು, ಕುಟುಂಬಶ್ರೀ, ನೌಕರಿ ಖಾತರಿ ಯೋಜನೆ ಇತ್ಯಾದಿಗಳೊಂದಿಗೆ ಸೇರಿ ಭತ್ತ, ತರಕಾರಿ, ಗೆಡ್ಡೆ ಇತ್ಯಾದಿ ಕೃಷಿ ಜಿಲ್ಲೆಯಾದ್ಯಂತ ನಡೆಸಲಾಗುತ್ತಿವೆ. ಯೋಜನೆಯ ಅಂಗವಾಗಿ ಕೋಳಿ, ಮೀನು, ಮೇಕೆ ಸಾಕಣೆ ಫಾರಂಗಳ ಆರಂಭವೂ ಜಿಲ್ಲೆಯಲ್ಲಿ ಶೀಘ್ರದಲ್ಲೇ ನಡೆಯಲಿದೆ.
ಕಾಸರಗೋಡು ಜಿಲ್ಲೆಯಲ್ಲಿ ಈ ಯೋಜನೆಯ ಏಕೀಕಿರಣವನ್ನು ಹರಿತ ಕೇರಳಂಮಿಷನ್ ನಡೆಸುತ್ತಿದೆ. ಯೋಜನೆ ಚಟುವಟಿಕೆಗಳನ್ನು ದಕ್ಷಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಕೋರ್ ಸಮಿತಿ ರಚಿಸಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಅಧ್ಯಕ್ಷರಾಗಿ, ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಸಂಚಾಲಕರಾಗಿ ಸಮಿತಿಯನ್ನು ಮುನ್ನಡೆಸುತ್ತಿದ್ದಾರೆ. ವಿವಿಧ ಇಲಾಖೆಗಳ ಜಿಲ್ಲಾ ಮುಖ್ಯಸ್ಥರು ಕೋರ್ ಸಮಿತಿ ಸದಸ್ಯರಾಗಿದ್ದಾರೆ.
ಜಿಲ್ಲೆಯ ಬಂಜರು ಜಾಗಗಳ ಪತ್ತೆಗೆ ಪ್ರತಿ ವಾರ್ಡ್ ಮಟ್ಟದಲ್ಲೂ ಸಮೀಕ್ಷೆ ನಡೆಸಲಾಗುತ್ತಿದೆ. ಸುಭಿಕ್ಷ ಕೇರಳಂ ಎಂಬ ಎಂಬ ಮೊಬೈಲ್ ಅಪ್ಲಿಕೇಷನ್ ನಲ್ಲಿ ಈ ವಿಚಾರವನ್ನು ಅಪ್ ಲೋಡ್ ನಡೆಸಲಾಗುತ್ತಿದೆ. ವಾರ್ಡ್ ಸದಸ್ಯರ ನೇತೃತ್ವದಲ್ಲಿ ವಾರ್ಡ್ ಮಟ್ಟದ ಚಟುವಟಿಕೆಗಳು ನಡೆಯುತ್ತಿವೆ. ಯುವಜನತೆ, ಕುಟುಂಬಶ್ರೀ, ನೌರಿ ಖಾತರಿ ಯೋಜನೆ ಇತ್ಯಾದಿಗಳ ಸೇವೆ ಸಮೀಕ್ಷೆಗೆ ಲಭಿಸುತ್ತಿದೆ.


