ತಿರುವನಂತಪುರ: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಏರ್ಪಡಿಸಿದ ಕ್ವಾರಂಟೈನ್ ನಿಬಂಧನೆಗಳನ್ನು ಉಲ್ಲಂಘಿಸಿದವರಿಗೆ 5000 ರೂ. ದಂಡ ವಿಧಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ.
ಕೋವಿಡ್ ಮಾನದಂಡಗಳನ್ನು ಉಲ್ಲಂಘಿಸಿ ಧರಣಿ ಮುಷ್ಕರ ಇತ್ಯಾದಿ ನಡೆಸಿ ಅದರಲ್ಲಿ ಭಾಗವಹಿಸಿದವರಿಗೆ 1000 ರೂ. ನಂತೆ ದಂಡ ವಿಧಿಸಲಾಗುವುದು. ಇದಕ್ಕೆ ಪೂರಕವಾಗಿ ಸಾಂಕ್ರಾಮಿಕ ರೋಗ ನಿಯಂತ್ರಣ ಕಾನೂನಿನಲ್ಲಿ ಅಗತ್ಯದ ತಿದ್ದುಪಡಿ ರಾಜ್ಯ ಸರಕಾರ ಅಧಿಸೂಚನೆ ಜಾರಿಗೊಳಿಸಿದೆ.
ಸಾರ್ವಜನಿಕ ಸ್ಥಳ, ರಸ್ತೆ, ಕಾಲ್ನಡೆ ದಾರಿಯಲ್ಲಿ ಉಗುಳಿದಲ್ಲಿ 200 ರೂ., ನಿಯಂತ್ರಣ ವಲಯಕ್ಕೊಳಪಟ್ಟ ಪ್ರದೇಶಕ್ಕೆ ನುಗ್ಗಿದಲ್ಲಿ 200 ರೂ., ಸಾರ್ವಜನಿಕ ಮತ್ತು ಖಾಸಗಿ ವಾಹನಗಳು ಕೋವಿಡ್ ನಿಯಮ ಉಲ್ಲಂಘಿಸಿದಲ್ಲಿ 2000 ರೂ. ದಂಡ ವಿಧಿಸಲು ಸರ್ಕಾರ ಕಾನೂನು ರೂಪಿಸಿದೆ.
ನಿಯಂತ್ರಣಗಳನ್ನು ಉಲ್ಲಂಘಿಸಿ ಸಾರ್ವಜನಿಕ ಸಮಾರಂಭ, ಮದುವೆ, ಧಾರ್ಮಿಕ ಕಾರ್ಯಕ್ರಮ ಇತ್ಯಾದಿ ನಡೆಸಿದಲ್ಲಿ 1500 ರೂ. ದಂಡ ವಿಧಿಸಲಾಗುವುದು. ನಿಯಂತ್ರಣಗಳನ್ನು ಉಲ್ಲಂಘಿಸಿ ಶವಸಂಸ್ಕಾರ ನಡೆಸಿದಲ್ಲಿ 700 ರೂ., ಶಾಲೆಗಳು, ಕಚೇರಿಗಳು, ಅಂಗಡಿಗಳು ಮೊದಲಾದವು, ಮತ್ತಿತರೆಡೆ ಜನರು ಗುಂಪು ಸೇರಲು ಸಾಧ್ಯತೆಯಿರುವಲ್ಲಿ ನಿಯಂತ್ರಣಗಳನ್ನು ಉಲ್ಲಂಘಿಸಿದರೆ 500 ರೂ., ವಲಸೆ ಕಾರ್ಮಿಕರಿಗಿರುವ ನಿಯಂತ್ರಣಗಳನ್ನು ಉಲ್ಲಂಘಿಸಿದಲ್ಲಿ 500 ರೂ., ಮದುವೆ ನಿಬಂಧನೆಯನ್ನು ಉಲ್ಲಂಘಿಸಿದಲ್ಲಿ 2000 ರೂ. ದಂಡ ವಿಧಿಸುವುದಾಗಿ ಸರ್ಕಾರ ತಿಳಿಸಿದೆ.
ಅಂಗಡಿಗಳು ಮತ್ತಿತರ ವ್ಯಾಪಾರಗಳಿಗಿರುವ ನಿಬಂಧನೆಗಳನ್ನು ಉಲ್ಲಂಘಿಸಿದಲ್ಲಿ 500 ರೂ., ಕೋವಿಡ್ ನಿಯಂತ್ರಣ ಪೆÇೀರ್ಟಲ್‍ನಲ್ಲಿ ನೋಂದಾವಣೆ ಉಲ್ಲಂಘಿಸಿದಲ್ಲಿ ಹೊಟೇಲ್‍ಗಳಿಗೆ 1000 ರೂ. ದಂಡ ವಿಧಿಸಲಾಗುವುದು. ಇದರ ಹೊರತಾಗಿ ಸಾಮಾಜಿಕ ಅಂತರ ಪಾಲಿಸದವರಿಗೂ 200 ರೂ. ದಂಡ ವಿಧಿಸಲಾಗುವುದೆಂದು ಸರ್ಕಾರ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.


