ಕಾಸರಗೋಡು: ಜಿಲ್ಲೆಯಲ್ಲಿ ಕೋವಿಡ್ ಹಿನ್ನೆಲೆಯ ನಿಬಂಧಗಳನ್ನು ಬಿಗಿಗೊಳಿಸಲಾಗಿದ್ದು 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು 10 ವರ್ಷದೊಳಗಿನ ಮಕ್ಕಳಿಗೆ ಸಾರ್ವಜನಿಕ ಸಾರಿಗೆ ಸಂಚಾರ ನಿಷೇಧಿಸಲಾಗಿದೆ. ಕೆಎಸ್‍ಆರ್‍ಟಿಸಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಸ್ ಗಳ ಮೂಲಕ 65 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 10 ವರ್ಷದೊಳಗಿನ ಮಕ್ಕಳು ಪ್ರಯಾಣಿಸುವಂತಿಲ್ಲ.
ಮಂಗಳೂರಿಗೆ ಹೋಗುವ ವಾಹನಗಳಿಗೆ ನಿರ್ಬಂಧ:
ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುವವರು ಮತ್ತು ತರಕಾರಿ ಅಂಗಡಿಗಳಲ್ಲಿ ಕೆಲಸ ಮಾಡುವವರಲ್ಲಿ ಕೋವಿಡ್ ದೃಢಪಟ್ಟಿರುವ ಬೆನ್ನಿಗೆ ಕಾಸರಗೋಡು ಜಿಲ್ಲೆಯ ವಾಹನಗಳನ್ನು ಮಂಗಳೂರಿಗೆ ತೆರಳಲು ಮತ್ತು ಅಲ್ಲಿಂದ ಈಚೆಗೆ ಬರಲು ಬಿಗು ನಿಯಂತ್ರಣ ಹೇರಲಾಗಿದೆ. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಆರ್‍ಟಿಒ ಗುರುವಾರ ಜಿಲ್ಲಾ ವ್ಯಾಪಾರಿ ಮುಖಂಡರೊಂದಿಗೆ ಚರ್ಚೆ ನಡೆಸಿತು. ಮಂಗಳೂರಿಗೆ ಯಾವ ವಾಹನಗಳು ಹೋಗುತ್ತಿವೆ ಎಂಬುದನ್ನು ತಿಳಿಯಲು ವಾಹನಗಳ ನೌಕರರಿಗೆ (ಚಾಲಕ ಮತ್ತು ಕ್ಲೀನರ್) ವಿಶೇಷ ಪಾಸ್ ನೀಡಲಾಗುವುದು. ಆರ್‍ಟಿಒ ಪಾಸ್ ಇಲ್ಲದ ವಾಹನಗಳನ್ನು ಮಂಗಳೂರಿಗೆ ಪ್ರಯಾಣಿಸಲು ಅನುಮತಿಸುವುದಿಲ್ಲ. ಪಾಸ್ ಪಡೆದ ನಂತರ ಮಂಗಳೂರಿಗೆ ಹೋಗುವವರಿಗೆ ಜಿಲ್ಲೆಯ ಪಿಎಚ್‍ಸಿಗಳಲ್ಲಿ ವಾರಕ್ಕೊಮ್ಮೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.
ವಿವಾಹ ಸಮಾರಂಭಗಳಿಗೆ ಪಾಸ್ ಗಳಿಲ್ಲ!:
ಜುಲೈ 31 ರವರೆಗೆ ಇತರ ರಾಜ್ಯಗಳಿಂದ ಬಂದು ಕಾಸರಗೋಡು ಜಿಲ್ಲೆಯಲ್ಲಿ ವಿವಾಹ ಸಮಾರಂಭಗಳಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಪ್ರಸ್ತುತ, ಕೇವಲ ಐದು ಪಾಸ್ ಗಳನ್ನು ಮಾತ್ರ ಅನುಮತಿಸಲಾಗಿದೆ. ಜಿಲ್ಲೆಯಲ್ಲಿ 10 ಕ್ಕೂ ಹೆಚ್ಚು ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಿಸಲಾಗಿದೆ. ಸುಭಿಕ್ಷ ಕೇರಳದಂತಹ ಕಾರ್ಯಕ್ರಮಗಳನ್ನು ಜುಲೈ 31 ರವರೆಗೆ ಮುಂದೂಡಲು ಸೂಚಿಸಲಾಗಿದೆ. ಕೋವಿಡ್ ಮಾನದಂಡಗಳಿಗೆ ವಿರುದ್ಧವಾಗಿ ಜನಸಂದಣಿಯನ್ನು ತಡೆಯುವುದು ಉದ್ದೇಶವೆಂದು ತಿಳಿಸಲಾಗಿದೆ.


