ಕಾಸರಗೋಡು: ಮುಂಬರುವ ಸಂಸತ್ ಅಧಿವೇಶನದಲ್ಲಿ ಭಾರತದಾತ್ಯಂತ ನಾಥ ಸಂಪ್ರದಾಯ ಹಿನ್ನೆಲೆಯುಳ್ಳ ಜೋಜಿ/ಯೋಗಿ ಸಮಾಜ ಬಾಂಧವರನ್ನು ಒಂದೇ ವೇದಿಕೆಯಡಿ ಸಂಘಟಿಸುವುದಲ್ಲದೆ ಸಮಾಜ ಬಾಂಧವರು ಹಿಂದುಳಿದಿರುವುದರಿಂದ ಸರ್ಕಾರದಿಂದ ಮಾನದಂಡಗಳಿಗೆ ಅನುಸರಿಸಿ ಸೌಲಭ್ಯಗಳನ್ನು ಒದಗಿಸುವಂತೆ ರಾಜಸ್ಥಾನದ ಡಾ.ಬಿಪಿನ್ ಯೋಗಿ ಅವರ ಮುಂದಾಳತ್ವದಲ್ಲಿ ಎಲ್ಲಾ ರಾಜ್ಯದ ಸಂಸದರಿಗೆ ಮನವಿ ನೀಡಲು ಈಗಾಗಲೇ ಯೋಜನೆ ರೂಪೀಕರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾ ಜೋಗಿ ಸಮಾಜ ಸುಧಾರಕ ಸಂಘದ ಪದಾಧಿಕಾರಿಗಳು ಕಾಸರಗೋಡು ಸಂಸದ ರಾಜಮೋಹನ ಉಣ್ಣಿತ್ತಾನ್ ಅವರನ್ನು ಕಾಸರಗೋಡಿ ನಿವಾಸದಲ್ಲಿ ಬುಧವಾರ ಭೇಟಿಯಾಗಿ ಮನವಿ ಸಮರ್ಪಿಸಲಾಯಿತು. ಈ ಸಂದರ್ಭ ಮಾತನಾಡಿದ ಸಮಸದ ರಾಜಮೋಹನ ಉಣ್ಣಿತ್ತಾನ್ ಅವರು ರಾಜ್ಯದ ಎಲ್ಲಾ ಸಂಸದರ ಬೆಂಬಲದೊಂದಿಗೆ ಸಂಸತ್ತಿನಲ್ಲಿ ಧ್ವನಿಮತದೊಂದಿಗೆ ಈ ಬಗ್ಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಕಾಸರಗೋಡು ಜೋಗಿ ಸುಧಾರಕ ಸಂಘದ ಗೌರವಾಧ್ಯಕ್ಷ ಗೋಪಾಲಕೃಷ್ಣ ಕೆ.ಮಂಜೇಶ್ವರ ನೇತೃತ್ವದಲ್ಲಿ ಭೇಟಿಯಾದ ನಿಯೋಗದಲ್ಲಿ ಪದಾಧಿಕಾರಿಗಳಾದ ಐತ್ತಪ್ಪ ಮವ್ವಾರು, ಭವಾನಿಶಂಕರ ಮಾಸ್ತರ್ ಎಡನೀರು, ಮಹೇಶ್ ಪುಣಿಯೂರು, ಭಾಸ್ಕರ ಎನ್.ಬದಿಯಡ್ಕ ಉಪಸ್ಥಿತರಿದ್ದರು.


