ಮುಂದುವರಿದ ಭಾಗ-06
4)ಇನ್ನೊಬ್ಬರ ಬಟ್ಟೆ ಧರಿಸುವುದು: ಮನೆಯಲ್ಲಿ ಬೇರೆ ಯಾರಿಗಾದರೂ ಈ ತುರಿಕೆ ಇದ್ದು, ಅವರ ಬಟ್ಟೆಯನ್ನು ಮತ್ತೊಬ್ಬರು ಧರಿಸಿಕೊಂಡರೆ ಈ ತುರಕೆ ಸಾಂಕ್ರಾಮಿಕವಾಗಿ ಹರಡಬಹುದು ಅಥವಾ ಸ್ನೇಹಿತರ, ಸಂಬಂಧಿಕರ ಮನೆಗೆ ಹೋದಾಗ ಅಥವಾ ಅವರು ನಮ್ಮಲ್ಲಿ ಬಂದಾಗ ಅವರ ಬಟ್ಟೆಗಳನ್ನು ಧರಿಸುವುದರಿಂದ ಈ ಖಾಯಿಲೆ ನಿಮಗೂ ಬರುವ ಪ್ರಮೇಯ ಒದಗಿಬರಬಹುದು.
5) ರೋಗ ಇರುವವರು ಬಟ್ಟೆಯನ್ನು ನಿಮ್ಮ ಬಟ್ಟೆಯ ಜೊತೆಗೆ ಬಕೆಟ್ ಗಳಲ್ಲಿ, ವಾಷಿಂಗ್ ಮೆಷಿನ್ ನಲ್ಲಿ ಜೊತೆಗೇ ಹಾಕುವುದರಿಂದ, ಬಟ್ಟೆಯನ್ನು ಒಣಗಲು ನಿಮ್ಮ ಬಟ್ಟೆಯ ಜೊತೆಗೇ ಹಾಕುವುದರಿಂದ ಈ ರೋಗ ಹರಡುತ್ತದೆ.
6) ಅಂಗಡಿಯಿಂದ ಅಥವಾ ರಸ್ತೆ ಬದಿಗಳಿಂದ ಕೊಳ್ಳಲಾಗುವ ಹೊಸ ಬಟ್ಟೆ-ಬರೆಗಳನ್ನು ತೊಳೆಯದೇ ಉಪಯೋಗಿಸುವುದರಿಂದ ಗಜಕರ್ಣ ಬರುವ ಸಾಧ್ಯತೆ ಇದೆ. ಅನೇಕ ಮಳಿಗೆಗಳಲ್ಲಿ ಟ್ರಯಲ್ ಗೆ ಎಂದು ಬಟ್ಟೆ ಕೊಟ್ಟು ಅದನ್ನು ಗ್ರಾಹಕರು ಕೊಂಡುಕೊಳ್ಳದಿದ್ದಾಗ ಪುನಃ ನೂತನವಾಗಿ ಮಡಚಿಟ್ಟು ಇನ್ನೊಬ್ಬರಿಗೆ ಮಾರಬಹುದು ಎನ್ನುವುದನ್ನೂ ನೆನಪಲ್ಲಿಡಿ. ಆದ್ದರಿಂದ ಹೊಸ ಒಳ ಉಡುಪುಗಳನ್ನು ಕೊಂಡಾಗ ಅದನ್ನು ಸರಿಯಾಗಿ ಒಗೆದು, ಬಿಸಿಲಿನಲ್ಲಿ ಒಮ್ಮೆ ಒಣಗಿಸಿ ಅಥವಾ ಇಸ್ತ್ರಿ ಮಾಡಿ ಉಪಯೋಗಿಸುವುದು ಉತ್ತಮ. ಅಲ್ಲದೆ ಅಂಗಡಿಗಳಲ್ಲಿ ಟ್ರಯಲ್ ಗಾಗಿ ಇಟ್ಟಿರುವ ಬಟ್ಟೆಗಳನ್ನೂ ಧರಿಸುವುದು ಒಳಿತಲ್ಲ.
7) ದೋಬಿಯ ತುರಿಕೆ: ದೋಬಿಗಳಿಗೆ ಬಟ್ಟೆಯನ್ನು ಕೊಟ್ಟು ಅವುಗಳು ಸರಿಯಾಗಿ ಸ್ವಚ್ಚಗೊಳ್ಳದಿದ್ದಾಗ ಅಥವಾ ಉತ್ತಮ ರೀತಿಯಲ್ಲಿ, ಸ್ವಚ್ಚ ನೀರಿನಲ್ಲಿ ಒಗೆಯದೆ ಇದ್ದಾಗ ತುರಿಕೆ ಬರಬಹುದು. ಇದನ್ನು ಆಂಗ್ಲ ಭಾಷೆಯಲ್ಲಿ ದೋಬೀಸ್ ಇಚ್ಚ್ ಎನ್ನುತ್ತಾರೆ. ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿಗಳಲ್ಲಿ, ಆಗಾಗ ಪ್ರವಾಸಗೈದು ಹೋಟೆಲ್ ಗಳಲ್ಲಿ ಉಳಿದಾಗ ದೋಬಿಗಳಿಗೆ ಬಟ್ಟೆ ಕೊಡುವವರಿಗೆ ಈ ರೋಗ ಹೆಚ್ಚಾಗಿ ಬರುತ್ತದೆ ಮತ್ತು ಅಂಟಿಕೊಳ್ಳುತ್ತದೆ. ದೋಬಿಗಳು ಬಟ್ಟೆ ಒಗೆಯುವಾಗ ಎಲ್ಲರ ಬಟ್ಟೆಗಳನ್ನು ಒಟ್ಟು ಮಾಡುವುದರಿಂದ ಈ ರೋಗ ಸುಲಭವಾಗಿ ಹರಡುತ್ತದೆ.
8)ಅಸ್ತಮಾ ಇತ್ಯಾದಿ ಗುಣವಾಗದ ಕಾಯಿಲೆಗಳಿಗಾಗಿ ಬಳಸುವ ಸ್ಟೀರೋಯಿಡ್ ಇತ್ಯಾದಿ ಔಷಧಿಗಳಿಂದ ದೇಹದ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಆಗ ಈ ಫಂಗಸ್ ಕ್ರಿಗಳು ದೇಹವನ್ನು ಬಹುಬೇಗ ಅಂಟಿಕೊಳ್ಳುತ್ತದೆ.
9) ಸಿಹಿಮೂತ್ರ, ರಕ್ತಹೀನತೆ ಇತ್ಯಾದಿ ಖಾಯಿಲೆಗಳಿದ್ದರೆ ಫಂಗಸ್ ರೋಗ ಆಗಾಗ ಮರುಕಳಿಸಬಹುದು.
10) ಮನೆಯಲ್ಲಿರುವ ನಾಯಿ, ಬೆಕ್ಕು ಇತ್ಯಾದಿ ಸಾಕು ಪ್ರಾಣಿಗಳಿಂದಲೂ ಈ ರೋಗ ಹರಡಬಹುದು.
ಈ ಮೊದಲು ಉದಾಹರಣೆ ಕೊಟ್ಟ 12 ಜನ ಸದಸ್ಯರಿರುವ ಮನೆಯಲ್ಲಿ ಒಬ್ಬರನ್ನು ಹೊರತುಪಡಿಸಿ ಉಳಿದ 11 ಮಂದಿಗೆ ಈ ರೋಗ ಬಂದಿದೆ. ರೋಗ ಬಾಧಿಸದ ಈ ಒಬ್ಬ ಸದಸ್ಯ ಇಳಿ ವಯಸ್ಸಿನವರಾಗಿದ್ದರು. ಅವರ ಕೋಣೆಗೆ ಯಾರೂ ಹೋಗುತ್ತಿರಲಿಲ್ಲ. ಮತ್ತು ಅವರ ಬಟ್ಟೆಗಳನ್ನು(ಇತ್ಯಾದಿಗಳನ್ನು) ಬೇರೆಯೇ ತೊಳೆಯುತ್ತಿದ್ದರು. ಹಾಗಾಗಿ ಅವರೊಬ್ಬರಿಗೆ ಮಾತ್ರ ಈ ರೋಗ ಬಾಧಿಸಲಿಲ್ಲ.
ಬರಹ: ಡಾ.ಪ್ರಸನ್ನಾ ನರಹರಿ.ಕಾಸರಗೋಡು. ಖ್ಯಾತ ಚರ್ಮ-ಲೈಂಗಿಕ ರೋಗ ತಜ್ಞರು.
ನಿರ್ದೇಶಕಿ ಐಎಡಿ ಕಾಸರಗೋಡು.
ನಾಳೆಗೂ ಮುಂದುವರಿಯುವುದು.........................







