ತಿರುವನಂತಪುರ: ಮಹತ್ತರ ವಿದ್ಯಮಾನವೆಂಬಂತೆ ಸೋಮವಾರ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಕುಸಿತ ಉಂಟಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತನಾಡಿ, ರಾಜ್ಯದಲ್ಲಿ 702 ಜನರಿಗೆ ಕೋವಿಡ್ -19 ಸೋಮವಾರ ದೃಢಗೊಂಡಿರುವುದಾಗಿ ಮಾಹಿತಿ ನೀಡಿದರು. ಜೊತೆಗೆ 745 ಜನರು ಸೋಂಕುಮುಕ್ತರಾಗಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ನಿನ್ನೆ 927 ಜನರಿಗೆ ಕೋವಿಡ್ ದೃಢಪಟ್ಟಿತ್ತು. ನಿನ್ನೆ ಕೋವಿಡ್ ಪ್ರಕರಣಗಳಲ್ಲಿ, ಸಂಪರ್ಕದ ಮೂಲಕ 733 ಜನರಿಗೆ ಸೋಂಕು ತಗುಲಿತ್ತು. ಕೋವಿಡ್ ಪ್ರಕರಣಗಳು ಮತ್ತು ರಾಜ್ಯದ ಲಾಕ್ ಡೌನ್‍ಗಳಿಗೆ ಸಂಬಂಧಿಸಿದ ವಿವರಗಳು ಇಂತಿವೆ:
ಸೋಂಕಿತರ ಜಿಲ್ಲಾವಾರು ಅಂಕಿಅಂಶಗಳು:
ತಿರುವನಂತಪುರ 161, ಮಲಪ್ಪುರಂ 86, ಇಡುಕಿ 70, ಕೋಝಿಕ್ಕೋಡ್ 68, ಕೊಟ್ಟಾಯಂ 59, ಪಾಲಕ್ಕಾಡ್ 41, ತ್ರಿಶೂರ್ 40, ಕಣ್ಣೂರು 38, ಕಾಸರಗೋಡು 38, ಆಲಪ್ಪುಳ 30, ಕೊಲ್ಲಂ 22, ಪತ್ತನಂತಿಟ್ಟು 17, ವಯನಾಡ್ 17 ಮತ್ತು ಎರ್ನಾಕುಳಂನಲ್ಲಿ 15 ಮಂದಿಗಳಲ್ಲಿ ಕೋವಿಡ್ ರೋಗ ಪತ್ತೆಯಾಗಿದೆ. ತಿರುವನಂತಪುರ 65, ಕೊಲ್ಲಂ 57, ಪತ್ತನಂತಿಟ್ಟು 49, ಆಲಪ್ಪುಳ 150, ಕೊಟ್ಟಂ 13, ಇಡುಕ್ಕಿ 25, ಎರ್ನಾಕುಳಂ 69, ತ್ರಿಶೂರ್ 45, ಪಾಲಕ್ಕಾಡ್ 9, ಮಲಪ್ಪುರಂ 88, ಕೋಝಿಕ್ಕೋಡ್ 41, ವಯನಾಡ್ 49, ಕಣ್ಣೂರು 32 ಮತ್ತು ಕಾಸರಗೋಡಿನಲ್ಲಿ 53 ಮಂದಿ ಸೋಂಕಿತರು ಇಂದು ರೋಗಮುಕ್ತರಾದರು.
ರಾಜ್ಯದಲ್ಲಿ ಇಂದು 2 ಕೋವಿಡ್ ಸಾವುಗಳು:
ರಾಜ್ಯದಲ್ಲಿ ಇಂದು ಎರಡು ಕೋವಿಡ್ ಮರಣಗಳು ಉಂಟಾಗಿದೆ. ಮೃತರನ್ನು ಕೋಝಿಕ್ಕೋಡ್ ನ ಮೊಹಮ್ಮದ್ ಮತ್ತು ಕೊಟ್ಟಾಯಂನ ಒಸ್ಸೆಪ್ ಜಾರ್ಜ್ ಎಂದು ಗುರುತಿಸಲಾಗಿದೆ. ಅವರ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ ಸೂಚಿಸಿದ್ದಾರೆ.
ಈ ಮಧ್ಯೆ ಎರ್ನಾಕುಳಂ ಜಿಲ್ಲೆಯಲ್ಲಿ ಇಂದು ಎರಡು ಕೋವಿಡ್ ಸಾವುಗಳು ವರದಿಯಾಗಿವೆ. ಆಲುವಾದ ಖಾಸಗೀ ಆಸ್ಪತ್ರೆಯಲ್ಲಿ ಎದೆನೋವಿನ ಚಿಕಿತ್ಸೆಯಲ್ಲಿದ್ದ ಎಡತ್ತಲ ನಿವಾಸಿ ಮೋಹನನ್ (65) ಮತ್ತು ಪಳ್ಳಕ್ಕರೆ ಅಂಬಲಪ್ಪಾಡಿಯ ಅಬೂಬಕ್ಕರ್ (72) ಕೊಚ್ಚಿಯ ಖಾಸಗೀ ಆಸ್ಪತ್ರೆಯಲ್ಲಿ ನಿಧನರಾದರು. ಇಡುಕ್ಕಿ ರಾಜಕ್ಕಾಡ್ ಮಮ್ಮಟ್ಟಿಕಾನಂನ ಸಿ.ವಿ.ವಿಜಯನ್ (61) ಅವರ ಕೋವಿಡ್ ಪರೀಕ್ಷೆಯಲ್ಲಿ ಸೋಂಕಿರುವುದು ಖಚಿತಗೊಂಡಿದೆಯೆಂದು ಕಳಮಶ್ವೇರಿ ವೈದ್ಯಕೀಯ ಕಾಲೇಜಿನ ವೈದ್ಯರು ಖಚಿತಪಡಿಸಿದ್ದಾರೆ. ಆಲಪ್ಪುಳ ಪಟ್ಟನಕ್ಕಾಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮೃತಪಟ್ಟ ವೃದ್ಧನಲ್ಲಿ ಕೋವಿಡ್ ದೃಢಪಡಿಸಲಾಗಿದೆ. ಪಟ್ಟನಕ್ಕಾಡ್ ಮೂರನೇ ವಾರ್ಡ್‍ನ ಚಾಲುಂಕಲ್ ಚಕ್ರಪಾಣಿ (79) ಅವರ ಮರಣೋತ್ತರ ಪರೀಕ್ಷೆಯಲ್ಲೂ ಸೋಂಕು ದೃಢಪಡಿಸಲಾಗಿದೆ. ಆದರೆ ಇವುಗಳನ್ನು ಅಧಿಕೃತ ಅಂಕಿ ಅಂಶಗಳಲ್ಲಿ ಬಿಡುಗಡೆ ಮಾಡಿಲ್ಲ.
ಈ ವರ್ಷ ಯಾವುದೇ ಕೋವಿಡ್ ಲಸಿಕೆ ಲಭ್ಯವಾಗದು- ಡಬ್ಲ್ಯುಎಚ್‍ಒ
ಕೋವಿಡ್ ಲಸಿಕೆ ಈ ವರ್ಷ ಲಭ್ಯವಾಗದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ತಿಳಿಸಿದೆ. ಲಸಿಕೆಯ ಮೊದಲ ಬಳಕೆಗೆ 2021 ರವರೆಗೆ ಕಾಯಬೇಕಾಗುತ್ತದೆ ಎಂದು ಡಬ್ಲ್ಯುಎಚ್‍ಒ ತುರ್ತು ಕಾರ್ಯಕ್ರಮದ ಮುಖ್ಯಸ್ಥ ಮೈಕ್ ರಯಾನ್ ಹೇಳಿದ್ದಾರೆ. ಲಸಿಕೆ ಕಂಡುಹಿಡಿಯಲು ಸಂಶೋಧಕರು ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ. ಶ್ರೀಮಂತರು ಅಥವಾ ಬಡವರು ಎಂಬುದನ್ನು ಲೆಕ್ಕಿಸದೆ ಇಡೀ ಜಗತ್ತಿಗೆ ಔಷಧಿ ಲಭ್ಯವಾಗುವಂತೆ ಮಾಡುವುದು ವಿಶ್ವ ಆರೋಗ್ಯ ಸಂಸ್ಥೆಯ ಗುರಿಯಾಗಿದೆ ಎಂದು ಅವರು ಹೇಳಿದರು. ಪ್ರಪಂಚದಾದ್ಯಂತದ ಸಂಶೋಧಕರು ಲಸಿಕೆ ಪ್ರಯೋಗದಲ್ಲಿದ್ದಾರೆ. ಈ ಪ್ರಯೋಗಗಳು ಮೂರನೇ ಹಂತದಲ್ಲಿವೆ. ಆದ್ದರಿಂದ, 2021 ರ ವೇಳೆಗೆ ಎಲ್ಲಾ ದೇಶಗಳಿಗೆ ಲಸಿಕೆ ತಲಪಲು ಸಾಧ್ಯವಾಗುತ್ತದೆ ಎಂದು ಆಶಿಸಲಾಗಿದೆ.


