ಕಾಸರಗೋಡು: ಸಂಪರ್ಕ ಮೂಲಕ ಕೋವಿಡ್ ಸೋಂಕು ಅಧಿಕವಾಗಿರುವ ಮಧೂರು ಗ್ರಾಮಪಂಚಾಯತ್ ನಲ್ಲಿ ಪ್ರತಿರೋಧ ಚಟುವಟಿಕೆಗಳನ್ನು ಆರೋಗ್ಯ ಇಲಾಖೆ ಚುರುಕುಗೊಳಿಸಿದೆ. ಇಲ್ಲಿ ನಡೆಸಲಾದ ಆಂಟಿಜೆನ್ ತಪಾಸಣೆ ಶಿಬಿರದಲ್ಲಿ 8 ಮಂದಿಗೆ ಕೋವಿಡ್ ಪಾಸಿಟವ್ ಪತ್ತೆಯಾಗಿದೆ.
ಪಂಚಾಯತ್ ವ್ಯಾಪ್ತಿಯಲ್ಲಿ ನಡೆಸಲಾದ ತಪಾಸಣೆಯಲ್ಲಿ ಕೋವಿಡ್ ಬಾಧಿತರ ಪ್ರಾಥಮಿಕ ಸಂಪರ್ಕದ 60 ಮಂದಿಯನ್ನು ಒಳಪಡಿಸಲಾಗಿತ್ತು. ಸೋಂಕು ಬಾಧೆ ಖಚಿತಗೊಂಡಿರುವವರನ್ನು ಜಿಲ್ಲೆಯ ವಿವಿಧ ಚಿಕಿತ್ಸಾ ಕೇಂದ್ರಗಳಿಗೆ ದಾಖಲಿಸಲಾಗಿದೆ. ಈ ವರೆಗೆ ಮಧೂರು ಪಂಚಾಯತ್ ವ್ಯಾಪ್ತಿಯಲ್ಲಿ 59 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್ ತಿಳಿಸಿದರು.
ಮಧೂರು ಗ್ರಾಮ ಪಂಚಾಯತ್ ನ 5,6,7,9,10,11,15,16,17,18 ವಾರ್ಡ್ ಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕೋವಿಡ್ ಕೇಸುಗಳು ವರದಿಯಾಗಿವೆ. ಸುಮಾರು 300 ಮಂದಿ ಮನೆಗಳಲ್ಲಿ ಕ್ವಾರೆಂಟೈನ್ ನಲ್ಲಿದ್ದಾರೆ. ಪ್ರಾಥಮಿಕ ಸಂಪರ್ಕ, ದ್ವಿತೀಯ ಸಂಪರ್ಕ ಪಟ್ಟಿ ಸಿದ್ಧಪಡಿಸಿ ಈ ಮಂದಿಯ ಬಗ್ಗೆ ನಿಗಾ ಇರಿಸಲಾಗಿದೆ ಎಂದವರು ನುಡಿದರು.
ಸ್ಥಳೀಯ ಉಳಿಯತ್ತಡ್ಕ ಅಟಲ್ ಜಿ ಸಭಾಂಗಣದಲ್ಲಿ ನಡೆದ ತಪಾಸಣೆ ಶಿಬಿರದಲ್ಲಿ ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಜ್ಯೂನಿಯರ್ ಹೆಲ್ತ್ ಇನ್ಸ್ ಪೆಕ್ಟರರಾದ ಗೋಪಾಲಕೃಷ್ಣನ್, ಶೌಕತ್, ಜ್ಯೂನಿಯರ್ ಹೆಲ್ತ್ ನರ್ಸ್ ಗಳಾದ ವಿ.ಶೋಭಾ, ಕೆ.ಜಿ.ಅಂಬಿಳಿ, ಶಾಂತಾ, ಸ್ಟಾಫ್ ನರ್ಸ್ ಗಳಾದ ಷಿಜಿ ಅಲ್ ಫೆÇೀನ್ಸ್, ನಸಿರ್ಂಗ್ ಅಸಿಸ್ಟೆಂಟ್ ವೇದಾವತಿ ಮೊದಲಾದವರು ನೇತೃತ್ವ ವಹಿಸಿದ್ದರು.


