ತಿರುವನಂತಪುರ: ತಿರುವನಂತಪುರ ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಸ್ವಪ್ನಾ ಸುರೇಶ್ ಅವರ ಲಾಕರ್‍ನಲ್ಲಿ ನಿರ್ಣಾಯಕ ಪುರಾವೆಗಳು ದೊರೆತಿವೆ ಎಂದು ಎನ್‍ಐಎ ಹೇಳಿದೆ. ಸ್ವಪ್ನಾಳ ಲಾಕರ್‍ನಲ್ಲಿದ್ದ ಹಣ ಮತ್ತು ಚಿನ್ನವನ್ನು ಎನ್‍ಐಎ ವಶಪಡಿಸಿಕೊಂಡಿತು.
ಎರಡು ಬ್ಯಾಂಕ್ ಲಾಕರ್ ಗಳಲ್ಲಿ ಶೇಖರಿಸಿ ಇಡಲಾಗಿದ್ದ 1 ಕೋಟಿ 5 ಲಕ್ಷ ರೂ. ಗಳನ್ನು ಎನ್‍ಐಎ ಪತ್ತೆಹಚ್ಚಿರುವುದು. ಸಾಕ್ಷ್ಯ ಸಂಗ್ರಹದ ವೇಳೆ ಈ ಅಕ್ರಮ ಹಣ ಗಮನಕ್ಕೆ ಬಂತೆಂದು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿರುವರು. ಇದರಲ್ಲಿ ಎಸ್‍ಬಿಐನ ಲಾಕರ್‍ನಿಂದ 64 ಲಕ್ಷ ರೂ. ಮತ್ತು ಫೆಡರಲ್ ಬ್ಯಾಂಕ್ ಲಾಕರ್ ನಲ್ಲಿ 36.5 ಲಕ್ಷ ರೂ.ಗಳಿದ್ದವೆಂದು ತನಿಖಾ ತಂಡ ತಿಳಿಸಿದೆ.
ಜೊತೆಗೆ ಎಸ್‍ಬಿಐ ಲಾಕರ್‍ನಿಂದ 982 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ನಗದು ಜೊತೆಗೆ ಚಿನ್ನವೂ ಪತ್ತೆಯಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಸುಮಾರು ಒಂದು ಕಿಲೋಗ್ರಾಂ ಚಿನ್ನ ಮನೆ ಹಾಗೂ ಲಾಕರ್ ಗಳಲ್ಲಾಗಿ ಪತ್ತೆಯಾಗಿದೆಯೆಂದು ತನಿಖಾ ತಂಡ ತಿಳಿಸಿದೆ.
ಆದರೆ ಈ ಚಿನ್ನಾಭರಣಗಳು ಸ್ವಪ್ನಾಳ ವಿವಾಹ ಸಂದರ್ಭ ಗಲ್ಪ್ ರಾಷ್ಟ್ರದ ಶೇಖ್ ಉಡುಗೊರೆಯಾಗಿ ನೀಡಿದ್ದರು ಎಂದು ಸ್ವಪ್ನಾ ಪರ ವಕೀಲರು ಹೇಳಿದ್ದಾರೆ.
ತನಿಖಾ ತಂಡವು ವಿವಿಧ ಬ್ಯಾಂಕುಗಳಲ್ಲಿ ದೊಡ್ಡ ಪ್ರಮಾಣದ ಠೇವಣಿಗಳ ಪುರಾವೆಗಳನ್ನು ಸಹ ಕಂಡುಹಿಡಿದಿದೆ. ಇವೆಲ್ಲವನ್ನೂ ವಿವರವಾಗಿ ಅಧ್ಯಯನ ಮಾಡಲಾಗುತ್ತಿದೆ. ಆದ್ದರಿಂದ ಅವರಿಗೆ ಜಾಮೀನು ನೀಡಬಾರದು ಎಂದು ತನಿಖಾ ತಂಡ ನ್ಯಾಯಾಲಯಕ್ಕೆ ತಿಳಿಸಿದೆ. ಜಾಮೀನು ನೀಡಿದರೆ ಸಾಕ್ಷ್ಯಗಳನ್ನು ನಾಶಪಡಿಸಬಹುದು ಎಂದು ಎನ್‍ಐಎ ತಂಡ ನ್ಯಾಯಾಲಯಕ್ಕೆ ತಿಳಿಸಿದೆ.
ಈಗ ಲಭ್ಯವಾಗಿರುವ ಭಾರೀ ಮೊತ್ತದ ಅಕ್ರಮ ಹಣ ಚಿನ್ನ ಕಳ್ಳ ಸಾಗಾಣಿಕೆಯಿಂದ ಗಳಿಸಿರುವ ಸಂಭಾವನೆಯೇ ಎನ್ನುವುದನ್ನು ಇನ್ನಷ್ಟೇ ತನಿಖೆ ನಡೆಸಬೇಕಾಗಿದೆ. ಗುರುವಾರ ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್ ಅವರನ್ನೂ ಎನ್‍ಐಎ ಪ್ರಶ್ನಿಸಿತ್ತು.


