ಕಾಸರಗೋಡು: ಕೋವಿಡ್ ಸೋಂಕು ಬಾಧಿತನ ಅಂತಿಮ ಸಂಸ್ಕಾರವನ್ನು ಆರೋಗ್ಯ ಇಲಾಖೆಯ ಸಂಹಿತೆ ಪ್ರಕಾರ ಅತೀವ ಜಾಗ್ರತೆಯೊಂದಿಗೆ ನಡೆಸಿ ಆರೋಗ್ಯ ಕಾರ್ಯಕರ್ತರು ನಾಡಿಗೆ ಮಾದರಿಯಾಗಿದ್ದಾರೆ.
ಕರ್ನಾಟಕದ ಹುಬ್ಬಳ್ಳಿಯಲ್ಲಿ ಕಳೆದ 25 ವರ್ಷಗಳಿಂದ ನೌಕರಿ ನಡೆಸುತ್ತಿದ್ದ ಮೊಗ್ರಾಲ್ ಪುತ್ತೂರು ಪಂಚಾಯತ್ ನ ಕೋಟೆಕುಂಜೆ ನಿವಾಸಿ ಮಧ್ಯವಯಸ್ಕ ವ್ಯಕ್ತಿ ಅಬ್ದುಲ್ ರಹಮಾನ್ ಕೋವಿಡ್ ಸೋಂಕು ಬಾಧೆಯಿಂದ ಕೊನೆಯುಸಿರೆಳೆದಿದ್ದರು.
ಮರಣಾನಂತರ ನಡೆಸಬೇಕಾದ ಎಲ್ಲ ಚಟುವಟಿಕೆಗಳನ್ನೂ ಕಟ್ಟುನಿಟ್ಟಿನ ಪ್ರಕಾರವೇ ನಡೆಸಿದ ಆರೋಗ್ಯ ಕಾರ್ಯಕರ್ತರು, ಸಾರ್ವಜನಿಕರ ಬೆಂಬಲದೊಂದಿಗೆ, ಮೃತರ ಕುಟುಂಬದ ಸಹಕಾರದೊಂದಿಗೆ ಅಂತಿಮಸಂಸ್ಕಾರ ನಡೆಸಿದ್ದರು.
ಅಬ್ದುಲ್ ರಹಮಾನ್ ಅವರು ಹೃದ್ರೋಗದಿಂದ ಬಳಲುತ್ತಿದ್ದು, ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವ್ಯಕ್ತಿ. ಊರಿಗೆ ಮರಳುವ ನಿಟ್ಟಿನಲ್ಲಿ ಆಗಮಿಸಿದ್ದ ಅವರು ಜು.7ರಂದು ಬೆಳಗಿನ ಜಾವಕ್ಕೆ ತಲಪ್ಪಾಡಿ ಚೆಕ್ ಪೆÇೀಸ್ಟ್ ಗೆ ಬಂದು ತಲಪಿದ್ದರು. ಮೊಗ್ರಾಲ್ ಪುತ್ತೂರು, ಕೋಟೆಕುಂಜೆ ನಿವಾಸಿಗಳಾದ ಇಬ್ಬರು ಈ ವೇಳೆ ಜತೆಗಿದ್ದರು. ಚೆಕ್ ಪೆÇೀಸ್ಟ್ ತಲಪಿದ ವೇಳೆ ಜ್ವರದಿಂದ ಬಳಲುತ್ತಿದ್ದ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸುವ ಯತ್ನ ನಡೆಸಲಾಗಿತ್ತು. ಆದರೆ ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು. ನಂತರ ನಡೆಸಿದ ತಪಾಸಣೆಯಲ್ಲಿ ಅವರಿಗೆ ಕೋವಿಡ್ 19 ಸೋಂಕು ತಗುಲಿರುವುದು ಖಚಿತಗೊಂಡಿತ್ತು. ಅಬ್ದುಲ್ ರಹಮಾನ್ ಅವರು ಕಳೆದ ಫೆಬ್ರವರಿಯಲ್ಲಿ ಊರಿಗೆ ಬಂದು ಮರಳಿದ್ದರು.
ಆಸ್ಪತ್ರೆಯಿಂದ ಆರೋಗ್ಯ ಕಾರ್ಯಕರ್ತರು ಸಕಲ ಸಜ್ಜೀಕರಣಗಳೊಂದಿಗೆ ಮೃತದೇಹವನ್ನು ಕೋಟೆಕುಂಜೆಯ ಮಸೀದಿ ಆವರಣಕ್ಕೆ ದಫನಕ್ಕಾಗಿ ಕರೆತರಲಾಗಿತ್ತು. ಸಂಸ್ಕಾರ ನಡೆಯುತ್ತಿದ್ದ ವೇಳೆ ಮನೆಮಂದಿಗೆ ಅಬ್ದುಲ್ ರಹಮಾನ್ ಅವರನ್ನು ಒಮ್ಮೆ ಕಣ್ತುಂಬ ಕಾಣುವ ಯೋಗವೂ ಲಭಿಸಿರಲಿಲ್ಲ. ಆದರೆ ಕುಟುಂಬದ ಸದಸ್ಯರು ನಾಡಿನ ಸುರಕ್ಷೆ ಹಿನ್ನೆಲೆಯಲ್ಲಿ ತುಂಬ ಸಂಯಮ ಪಾಲಿಸಿ ಸಹಕರಿಸಿದ್ದರು.
ಮೊಗ್ರಾಲ್ ಪುತ್ತೂರಿನ ಜ್ಯೂನಿಯರ್ ಹೆಲ್ತ್ ಇನ್ಸ್ ಪೆಕ್ಟರ್ ಸುಂದರ ಮತ್ತು ಚೆಂಗಳದ ಜ್ಯೂನಿಯರ್ ಹೆಲ್ತ್ ಇನ್ಸ್ ಪೆಕ್ಟರ್ ಕೃಷ್ಣ ಪ್ರಸಾದ್ ಅವರು ಅಂತಿಮ ಸಂಸ್ಕಾರ ಚಟುವಟಿಕೆಗಳಿಗೆ ನೇತೃಥ್ವ ವಹಿಸಿದ್ದರು. ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್ ಸಂಹಿತೆ ಪಾಲನೆಯ ನಿಗಾ ವಹಿಸಿದ್ದರು. ಸ್ಥಳೀಯ ಸ್ವಯಂ ಸೇವಕರಾದ ಅಶ್ರಫ್ ಎಡನೀರು, ಮುಜೀಬ್ ಕಂಬಾರ್, ಬಶೀರ್ ಕಡವತ್, ಕಬೀರ್ ಪೇರೂರು, ಹಮೀದ್ ಬೆಳ್ಳೂರು, ಸಿದ್ದೀಖ್ ಬದರ್ ನಗರ್ ಮೊದಲಾದವರು ಸಂಹಿತೆ ಪಾಲನೆ ಮೂಲಕ ಸಹಕಾರ ನೀಡಿದರು.


