ಕಾಸರಗೋಡು: ದುಬೈನ ರಾಸ್ ಅಲ್ ಖೈಮಾದಲ್ಲಿ ರಸ್ತೆ ಅಪಘಾತದಲ್ಲಿ ಕಾಸರಗೋಡು ನಿವಾಸಿ ಮೃತಪಟ್ಟಿದ್ದಾರೆ. ಮೃತನನ್ನು ಕಾಞಂಗಾಡ್‍ನ ಕೊಳವಯಲ್ ಕೊತ್ತಿಕ್ಕಾಲ್ ನಿವಾಸಿ ಇಬ್ರಾಹಿಂ ಮತ್ತು ಸಾಹಿದಾ ದಂಪತಿಗಳ ಪುತ್ರ ಮೊಹಮ್ಮದ್ ರಬೀರ್ (22) ಎಂದು ಗುರುತಿಸಲಾಗಿದೆ. ರಾಸ್ ಅಲ್ ಖೈಮಾದಲ್ಲಿ ಶಾಮ್ಸ್ ಸೂಪರ್ಮಾರ್ಕೆಟ್ ಉದ್ಯೋಗಿದ್ದರು.
ಅವರು ಶುಕ್ರವಾರ ರಾತ್ರಿ 11 ಗಂಟೆಗೆ ಸೂಪರ್ ಮಾರ್ಕೆಟ್ ಬಳಿಯ ಹೋಟೆಲ್‍ವೊಂದರಲ್ಲಿ ಚಹಾ ಸೇವಿಸಿ ವಸತಿಗೆ ತೆರಳಲು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಾಗಿದ್ದರೂ ಚಿಕಿತ್ಸೆ ವಿಫಲಗೊಂಡು ಶನಿವಾರ ಮುಂಜಾನೆ ನಿಧನರಾದರು. ಮೊಹಮ್ಮದ್ ರಬೀರ್ ರಜೆಯ ಕಾರಣ ಊರಿಗೆ ಬಂದವರು ಜನವರಿಯಲ್ಲಿ ಮರಳಿ ಕೆಲಸಕ್ಕಾಗಿ ವಿದೇಶಕ್ಕೆ ತೆರಳಿದ್ದರು. ಮೃತರು ತಂದೆ, ತಾಯಿ, ಸಹೋದರ, ಇಬ್ಬರು ಸಹೋದರಿಯರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತದೇಹವನ್ನು ಮನೆಗೆ ತರುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕುಟುಂಬ ಮೂಲಗಳು ತಿಳಿಸಿವೆ.


