ತಿರುವನಂತಪುರ: ತಿರುವನಂತಪುರದ ಪೂಂತುರಾದ ಕೋವಿಡ್ ಕಂಟೈನ್ ಮೆಂಟ್ ವಲಯದಲ್ಲಿ ಆರೋಗ್ಯ ಕಾರ್ಯಕರ್ತರು ಎದುರಿಸುತ್ತಿರುವ ಭಯಾನಕ ಅನುಭವಗಳು ಹೊರಬರುತ್ತಿದೆ. ಸಮುದಾಯ ಆರೋಗ್ಯ ಕೇಂದ್ರವನ್ನು ತಲುಪಿದ ವೈದ್ಯರು ಸಹಿತ ಆರೋಗ್ಯ ಕಾರ್ಯಕರ್ತರ ಕಾರನ್ನು ತಂಡ ತಡೆದು ನಿಲ್ಲಿಸಿ ಮಾಸ್ಕ್ ತೆಗೆದು ತಲೆಯನ್ನು ಕಾರಿನೊಳಗೆ ತೂರಿಸಿ ಕೆಮ್ಮುವುದು, ಬೆದರಿಸುವುದು ವ್ಯಾಪಕಗೊಳ್ಳುತ್ತಿದೆ ಎಂದು ಆರೋಪಿಸಲಾಗಿದೆ.
25 ವರ್ಷದ ವೈದ್ಯರೂ ಸೇರಿದಂತೆ ತಂಡವು ಪಿಪಿಎ ಕಿಟ್‍ಗಳು ಮತ್ತು ಎನ್ 95 ಮುಖವಾಡಗಳನ್ನು ಧರಿಸಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪರೀಕ್ಷೆಗೆ ಸಿದ್ಧತೆಗಾಗಿ ಆಗಮಿಸಿತ್ತು. ಅವರು ಆಗಮಿಸಿದಾಗ ಆ ಪ್ರದೇಶದಲ್ಲಿ ಯಾವುದೇ ಪ್ರತಿಭಟನೆಗಳು ನಡೆದಿಲ್ಲ. ಆದರೆ ಆರೋಗ್ಯ ಕೇಂದ್ರದ ಗೇಟ್ ತೆರೆಯಲು ಕಾಯುತ್ತಿರುವಾಗ, ಸುಮಾರು 50 ಜನರ ಗುಂಪು ಅನಿರೀಕ್ಷಿತವಾಗಿ ಕಾರನ್ನು ಸುತ್ತುವರಿದರು. ಕಾರಿನಲ್ಲಿ ತಂತ್ರಜ್ಞರು ಮತ್ತು ಇಬ್ಬರು ಸಿಬ್ಬಂದಿಗಳು, ದಾದಿಯರು ಇದ್ದರು.
ಈ ವೇಳೆ ಆಕ್ರೋಶಗೊಂಡಿದ್ದ ಜನರ ಗುಂಪು ಸಿಬ್ಬಂದಿಗಳನ್ನು ಕೆಟ್ಟದಾಗಿ ನಿಂದಿಸಿತು ಎಂದು ವೈದ್ಯರು ಹೇಳಿರುವರು. "ಯಾವಕಾರಣಕ್ಕೂ ಕಾರಿನ ಗಾಜನ್ನು ಕೆಳಕ್ಕೆ ಇಳಿಸಬಾರದೆಂದು ನಾನು ಚಾಲಕನಿಗೆ ಸೂಚಿಸಿದ್ದೆ. ಆದರೆ ಗುಂಪು ಕಾರಿನ ಬಾಗಿಲನ್ನು ಬಡಿಯುತ್ತ ಗುಲ್ಲು ಸೃಷ್ಟಿಸಿತು " ಎಂದು ವೈದ್ಯರೊಬ್ಬರು ಮಾಧ್ಯಮಗಳಿಗೆ ತಿಳಿಸಿರುವರು. ಅಂತಿಮವಾಗಿ, ಚಾಲಕನು ತನ್ನ ಗಾಜನ್ನು ಕೆಳಕ್ಕೆ ಇಳಿಸಿ ಕಾರನ್ನು ಮುಂದೆ ತೆರಳಲು ಅನುವಾದನು. ತಕ್ಷಣ, ಯಾರೋ ತಲೆ ಒಳಗೆ ಸರಿಸಿ ಜೋರಾಗಿ ಕೆಮ್ಮಿದನು. ನಮ್ಮಲ್ಲಿ ಕೋವಿಡ್ ಇದ್ದರೆ ನಿಮಗೂ ಅದು ಹಬ್ಬಲಿ ಎಂದು ಬೊಬ್ಬಿರಿದನು ಎಂದು ವೈದ್ಯರು ಹೇಳಿದ್ದಾರೆ. ಘಟನೆಯ ನಂತರ ನಾಲ್ವರು ಆರೋಗ್ಯ ಕಾರ್ಯಕರ್ತರು ಮತ್ತು ಚಾಲಕರ ಮೇಲೆ ನಿಗಾ ಇಡಲಾಗಿದೆ. ಅವರನ್ನು ಏಳು ದಿನಗಳ ಬಳಿಕ ಪರಿಶೀಲಿಸಿ ಕೋವಿಡ್ ಇಲ್ಲ ಎಂದು ಖಚಿತಪಡಿಸಿಕೊಂಡರೆ ಮಾತ್ರ ಅವರು ಕೆಲಸಕ್ಕೆ ಹೋಗಬಹುದು ಎಂದು ಅಧಿಕೃತರು ತಿಳಿಸಿದ್ದಾರೆ.
ಘಟನೆಯಿಂದ ಗಾಬರಿಗೊಂಡು ವಾಹನದಲ್ಲಿದ್ದ ದಾದಿಯೊಬ್ಬರು ಭಯದಿಂದ ಕಿರುಚಿದರು. ಬಳಿಕ ಆರೋಗ್ಯ ಕಾರ್ಯಕರ್ತರ ವಾಹನ ಭಾರೀ ಕಷ್ಟದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ವೈದ್ಯರು ತಿಳಿಸಿದ್ದಾರೆ. ನರ್ಸ್‍ಗೆ ಒಂದು ವರ್ಷದ ಮಗು ಇದೆ ಎಂದು ವೈದ್ಯರು ಹೇಳಿದ್ದಾರೆ.
ಘಟನೆಯ ನಂತರ ಆರೋಗ್ಯ ಸಚಿವ ಕೆ.ಕೆ.ಶೈಲಜಾ ಮತ್ತು ಜಿಲ್ಲಾಧಿಕಾರಿ ನವಜೋತ್ ಖೋಸ್ಲಾ ಅವರನ್ನು ಸಂಪರ್ಕಿಸಿ ಘಟನೆಯ ವಿವರ ನೀಡಲಾಗಿದ್ದು ತನಿಖೆಗೆ ಕ್ರಮ ಕೈಗೊಳ್ಳುವ ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆರೋಗ್ಯ ಕಾರ್ಯಕರ್ತರ ವಿರುದ್ಧದ ಭೀಕರ ಕೃತ್ಯಗಳು ಸ್ವೀಕಾರಾರ್ಹವಲ್ಲ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.


