ನವದೆಹಲಿ: ಇತಿಹಾಸ ಪ್ರಸಿದ್ದ ತಿರುವನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಲಿದೆ. ದೇವಾಲಯವನ್ನು ಸ್ವಾಧೀನಪಡಿಸಿಕೊಳ್ಳುವ ಹೈಕೋರ್ಟ್ ನಿರ್ಧಾರವನ್ನು ಪ್ರಶ್ನಿಸಿ ತಿರುವಾಂಕೂರು ರಾಜಮನೆತನ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ಬರಲಿದ್ದು ಸೋಮವಾರದ ತೀರ್ಪು ದೇವಾಲಯದ ಆಡಳಿತ ಸೇರಿದಂತೆ ಇತರ ವಿಷಯಗಳನ್ನು ಸ್ಪಷ್ಟಪಡಿಸಲಿದೆ.
ನ್ಯಾಯಮೂರ್ತಿಗಳಾದ ಯು ಲಲಿತ್ ಮತ್ತು ಇಂದೂ ಮಲ್ಹೋತ್ರಾ ಅವರ ಪೀಠವು ತೀರ್ಪನ್ನು ನೀಡಲಿದೆ. 2011ರ ಜನವರಿ 31 ರಂದು, ಹೈಕೋರ್ಟ್ ತೀರ್ಪು ನೀಡಿದ್ದು, ತಿರುವಾಂಕೂರಿನ ಕೊನೆಯ ರಾಜನ ಉತ್ತರಾಧಿಕಾರಿಗೆ ದೇವಾಲಯದ ಮೇಲೆ ಆನುವಂಶಿಕವಾಗಿ ಯಾವುದೇ ಅವಕಾಶವಿಲ್ಲದ ಕಾರಣ ದೇವಾಲಯವನ್ನು ಸರ್ಕಾರಕ್ಕೆ ವಹಿಸಲಾಗುವುದು ಎಂದು ತಿಳಿಸಿತ್ತು. ಇದರ ವಿರುದ್ಧ ರಾಜನ ಉತ್ತರಾಧಿಕಾರಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದರು.
ದೇವಾಲಯದ ಆಡಳಿತಕ್ಕಾಗಿ ಗುರುವಾಯೂರ್ ಶೈಲಿಯ ಮಂಡಳಿಯನ್ನು ರಚಿಸಬಹುದು ಎಂದು ರಾಜ್ಯ ಸರ್ಕಾರ ಕಳೆದ ಮಾರ್ಚ್‍ನಲ್ಲಿ ಸುಪ್ರೀಂ ಕೋರ್ಟ್‍ಗೆ ತಿಳಿಸಿತ್ತು. ಈ ಎಲ್ಲ ವಿಷಯಗಳ ಬಗ್ಗೆ ನ್ಯಾಯಾಲಯ ತೀರ್ಪು ನೀಡಲಿದೆ. ಆದರೆ, ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿದರೂ ದೇವಾಲಯದ ಆಡಳಿತವನ್ನು ತಿರುವಾಂಕೂರು ರಾಜಮನೆತನಕ್ಕೆ ಮಾತ್ರ ಹಸ್ತಾಂತರಿಸದಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಸೂಚಿಸಿತ್ತು.


