ಕುಂಬಳೆ: ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿ ಅಬ್ದುಲ್ಲ ಎಲ್ ಎ ಶಾಲೆಗಾಗಿ ಸ್ವತಃ ನಿರ್ಮಿಸಿದ ಸ್ಯಾನಿಟೈಸರ್ ಘಟಕವನ್ನು ಶಾಲಾ ಎನ್ ಎಸ್ ಎಸ್ ಸಹಕಾರದೊಂದಿಗೆ ಶುಕ್ರವಾರ ಶಾಲೆಗೆ ಸಮರ್ಪಿಸಲಾಯಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಹಮ್ಮದಲಿ ಉದ್ಘಾಟಿಸಿದರು.
ಶಾಲೆಯ ಹೈಯರ್ ಸೆಕೆಂಡರಿ ವಿಭಾಗದ ಪ್ಲಸ್ ಟು ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ಅಬ್ದುಲ್ಲ ಎಲ್ ಎ. ಶಾಲಾ ಎನ್ ಎಸ್ ಎಸ್ ಘಟಕದಲ್ಲಿ ವೈವಿಧ್ಯಮಯ ಚಟುವಟಿಕೆಗಳ ಮೂಲಕ ಈಗಾಗಲೇ ಗಮನಾರ್ಹ ಸಾಧನೆಗೈದು ಗುರುತಿಸಿಕೊಂಡವನಾಗಿದ್ದಾನೆ. ಸ್ವತಃ ನವೀನ ತಂತ್ರಜ್ಞಾನ ಬಳಸಿ ಇದೀಗ ಸ್ಯಾನಿಟೈಸರ್ ಯಂತ್ರ ಕಂಡುಹಿಡಿದಿದ್ದು ಮುಂದಿನ ದಿನದಲ್ಲಿ ಸ್ವಯಂಚಾಲಿತ ಡಿಸ್ಪೆನ್ಸರ್ ಯಂತ್ರ ತಯಾರಿಸುವುದಾಗಿ ಹೇಳಿಕೊಂಡಿದ್ದಾನೆ. ಈತ ಮೊಗ್ರಾಲ್ ಸರ್ಕಾರಿ ಶಾಲೆಯ ಶಿಕ್ಷಕ ಅಬ್ದುಲ್ ಖಾದರ್-ಸೂರಂಬೈಲು ಮೊಹಮ್ಮದ್ ಕೋಯಾ ಸ್ಮಾರಕ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಜಸೀಲ ದಂಪತಿಗಳ ಪುತ್ರ.
ನೂತನ ಸ್ಯಾನಿಟೈಸರ್ ಯಂತ್ರವನ್ನು ಶಾಲಾ ಹೈಯರ್ ಸೆಕೆಂಡರಿ ವಿಭಾಗದ ಶಿಕ್ಷಕ ಸತೀಶ್ ಮಾಸ್ತರ್ ಹಾಗೂ ಹೈಸ್ಕೂಲು ವಿಭಾಗದ ಶಿಕ್ಷಕ ಯೂಸುಫ್ ಮಾಸ್ತರ್ ಸ್ವೀಕರಿಸಿದರು. ಶಾಲಾ ಪ್ರಾಂಶುಪಾಲ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯಿನಿ ರೀಮಾ ಜೋನ್ ಶುಭಾಶಮಸನೆಗೈದರು. ಶಿಕ್ಷಕರಾದ ಮಧು, ಕಾರ್ತಿಕೇಯನ್, ವಸಂತಕುಮಾರಿ, ಚಿತ್ರಾ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ನೌಕರ ಸಂಘದ ಕಾರ್ಯದರ್ಶಿ ರವಿ ಮುಳ್ಳಂಜೇರಿ ಸ್ವಾಗತಿಸಿ, ಕಾರ್ಯಕ್ರಮ ಅಧಿಕಾರಿ ಸಿದ್ದೀಕ್ ಎ.ಕೆ. ವಂದಿಸಿದರು.


