ಕಾಸರಗೋಡು: ಜಿಲ್ಲೆಯಿಂದ ತರಕಾರಿ ಖರೀದಿಗೆ ಮಂಗಳೂರಿಗೆ ತೆರಳುವ ವಾಹನಗಳಿಗೆ ನಿಯಂತ್ರಣ ಹೇರಲಾಗುವುದು. ವಾಹನಗಳಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಏರ್ಪಡಿಸಲಾಗುವುದು. ಈ ಸಂಬಂಧ ಜಿಲ್ಲೆಯ ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸುವ ಸಂಬಂಧ ಆರ್.ಟಿ.ಒ. ನೇತೃತ್ವದಲ್ಲಿ ಇಂದು (ಜು.9) ಸಭೆ ನಡೆಯಲಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಇಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಆರ್.ಟಿ.ಒ.ಅಧಿಕಾರಿಗಳು ಈ ನಿಟ್ಟಿನ ಪಾಸ್ ಮಂಜೂರು ಮಾಡಲಿದ್ದಾರೆ. ವಾಹನದ ಚಾಲಕ ಮತ್ತು ಕ್ಲೀನರ್ ರಿಗೆ ಪ್ರತ್ಯೇಕ ಪಾಸ್ ಇರುವುದು. ಪಾಸ್ ಇಲ್ಲದವರಿಗೆ ಮಂಗಳೂರಿಗೆ ತೆರಳಲು ಅನುಮತಿ ಇರುವುದಿಲ್ಲ. ಇಂಥಾ ವಾಹನಗಳಲ್ಲಿ ತೆರಳುವವರು ಪ್ರತಿವಾರಕ್ಕೊಮ್ಮೆ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೊಳಪಡಬೇಕಿದ್ದು, ಅದಕ್ಕಿರುವ ಸೌಲಭ್ಯ ಏರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಗುರುತುಚೀಟಿ ಕಡ್ಡಾಯ:
ಗಡಿ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಗಾಗಿ ಆಗಮಿಸುವವರಿಗೆ ಗುರುತು ಚೀಟಿ ಕಡ್ಡಾಯ ಮಾಡಲಾಗಿದೆ. ಪಾಣತ್ತೂರು ಸಹಿತ ಗಡಿಪ್ರದೇಶಗಳ ಪಿ.ಎಚ್.ಸಿ.ಗಳಲ್ಲಿ ಇತರ ರಾಜ್ಯಗಳ ಕಾರ್ಮಿಕರಲ್ಲಿ ಕೆಲವರಿಗೆ ಕೋವಿಡ್ ಸೋಂಕು ಖಚಿತವಾಗಿರುವ ಹಿನ್ನೆಲೆಯಲ್ಲಿ ಗುರುತುಚೀಟಿ ಕಡ್ಡಾಯಗೊಳಿಸಲಾಗಿದೆ.
ವಿವಾಹ ಸಮಾರಂಭಕ್ಕೆ ತೆರಳಲು 31 ವರೆಗೆ ಪಾಸ್ ಇಲ್ಲ:
ವಿವಾಹ ಸಮಾರಂಭಗಳಿಗೆ ಜು.31 ವರೆಗೆ ಪಾಸ್ ಮಂಜೂರು ಮಾಡುವುದಿಲ್ಲ. ಇತರ ರಾಜ್ಯಗಳಿಗೆ ವಿವಾಹ ಸಂಬಂಧ ಸಮಾರಂಭಗಳಿಗೆ ತೆರಳುವವರಿಗೆ ನೂತನವಾಗಿ ಜು.31 ವರೆಗೆ ಪಾಸ್ ನೀಡುವುದಿಲ್ಲ. ಸದ್ರಿ ಈ ಸಂಬಂಧ ಪಾಸ್ ಮಂಜೂರು ಮಾಡಿರುವವರಲ್ಲಿ 5 ಮಂದಿಗೆ ಮಾತ್ರ ಅನುಮತಿ ನೀಡಲಾಗುವುದು ಎಂದು ಸಭೆ ಹೇಳಿದೆ.
ವೃದ್ಧರಿಗೆ,ಮಕ್ಕಳಿಗೆ ಸಾರ್ವಜನಿಕ ಸಂಚಾರಕ್ಕೆ ಅನುಮತಿ ಇಲ್ಲ:
65 ವರ್ಷಕ್ಕಿಂತ ಅಧಿಕ ವಯೋಮಾನದವರಿಗೆ, 10 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಸಾರ್ವಜನಿಕ ಸಂಚಾರಕ್ಕೆ ಅನುಮತಿ ಇಲ್ಲ. ಸರಕಾರಿ, ಖಾಸಗಿ ಬಸ್ ಸಹಿತ ಸಾರ್ವಜನಿಕ ವಾಹನಗಳಲ್ಲಿ ಅವರು ಸಂಚರಿಸಕೂಡದು ಎಂದು ಸಭೆ ತಿಳಿಸಿದೆ.
ಸಾರ್ವಜನಿಕ ಸಮಾರಂಭಗಳಿಗೆ ನಿಯಂತ್ರಣ:
ಜಿಲ್ಲೆಯಲ್ಲಿ ಸಾರ್ವಜನಿಕ ಸಮಾರಂಭ ನಡೆಸುವುದಿದ್ದರೆ 10ಕ್ಕಿಂತ ಅಧಿಕ ಮಂದಿ ಭಾಗವಹಿಸಕೂಡದು. ಸುಭಿಕ್ಷ ಕೇರಳಂ ನಂಥಾ ಕಾರ್ಯಕ್ರಮಗಳ ಉದ್ಘಾಟನೆ ಸಭೆಗಳನ್ನು ಜು.31 ವರೆಗೆ ನಡೆಸಕೂಡದು. ಕೋವಿಡ್ ಮಾನದಂಡಗಳಿಗೆ ವಿರೋಧವಾಗಿ ಜನ ಗುಂಪು ಸೇರಕೂಡದು.
ಕ್ರೀಡಾ ಸ್ಪರ್ಧೆಗಗಳಿಗೂ ನಿಷೇಧ:
ಫುಟ್ ಬಾಲ್, ಕ್ರಿಕೆಟ್ ಸಹಿತ ಕ್ರೀಡೆಗಳ ಸ್ಪರ್ಧೆ ನಡೆಸಲು ಜು.31 ವರೆಗೆ ಅನುಮತಿಯಿಲ್ಲ. ಈ ಸಂಬಂಧ ಈಗಾಗಲೇ ಸಂಬಂಧಪಟ್ಟ ಕ್ಲಬ್ ಗಳಿಗೆ ಮಾಹಿತಿ ನೀಡಲಾಗಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು.
ಹೆಚ್ಚುವರಿ ಸಿಬ್ಬಂದಿ ಕರ್ತವ್ಯಕ್ಕೆ:
ಕಟ್ಟುನಿಟ್ಟು ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಪೆÇಲೀಸರ ಹೊರತಾಗಿ ಕಂದಾಯ, ಅರಣ್ಯ, ಸಾರಿಗೆ, ಅಬಕಾರಿ ಇಲಾಖೆಗಳ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನೇಮಿಸಲಾಗಿದೆ.
ಎಣ್ಮಕಜೆ ಪಂಚಾಯತ್ ಗಡಿ ಪ್ರದೇಶದಲ್ಲಿ ತಾತ್ಕಾಲಿಕ ಪಡಿತರ ಅಂಗಡಿಯೊಂದನ್ನು ಆರಂಭಿಸಲು ಜಿಲ್ಲಾ ಸಪ್ಲೈ ಅಧಿಕಾರಿಗೆ ಆದೇಶ ನೀಡಲಾಗಿದೆ. ವಾರ್ಡ್ ಮಟ್ಟದ ಜಾಗ್ರತಾ ಸಮಿತಿಗಳ ಚಟುವಟಿಕೆಗಳನ್ನು ಚುರುಕುಗೊಳಿಸಲು ನಿರ್ಧರಿಸಲಾಗಿದೆ.
ಸಂಶಯ ನಿವಾರಣೆಗೆ ಕರೆಮಾಡಿ:
ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಸಂಬಂಧ ಸಂಶಯಗಳಿದ್ದರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಕೊರೋನಾ ನಿಯಂತ್ರಣ ಕೊಠಡಿಗೆ(ದೂರವಾಣಿ ಸಂಖ್ಯೆ: 04994 255001.) ಕರೆ ಮಾಡಬಹುದು.
ಸಭೆಯಲ್ಲಿ ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ವಲಯ ಕಂದಾಯಾಧಿಕಾರಿ ಆರ್.ಅಹಮ್ಮದ್ ಕಬೀರ್, ಡಿ.ವೈ.ಎಸ್.ಪಿ. ಸುನಿಲ್ ಕುಮಾರ್ ಸಹಿತ ಜಿಲ್ಲಾ ಕೊರೋನಾ ಕೋರ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.



