ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ದಿನ ಕಳೆದಂತೆ ವರ್ಧಿಸುತ್ತಿದ್ದು, ಈ ಪೈಕಿ ಸೋಂಕು ಉಂಟಾಗಲು ಮೂಲಗಳಿಲ್ಲದ ಪ್ರಕರಣಗಳೂ ಹೆಚ್ಚುತ್ತಿರುವುದು ಆರೋಗ್ಯ ಇಲಾಖೆಯನ್ನು ಗೊಂದಲಗೊಳಿಸಿದೆ. ಈ ಮಧ್ಯೆ ಎಟಿಎಂ ಕೌಂಟರ್‍ನಿಂದ ರಾಜ್ಯದಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ಉಂಟಾಗಿರುವ ಬಗ್ಗೆ ಆರೋಗ್ಯ ಇಲಾಖೆ ಪತ್ತೆಹಚ್ಚಿದೆ. ಕೊಲ್ಲಂ ಜಿಲ್ಲೆಯ ಕಲ್ಲುವಾತುಕಲ್ ಬಳಿಯ ಇಬ್ಬರು ಎಟಿಎಂಗೆ ಭೇಟಿ ನೀಡಿ ರೋಗಕ್ಕೆ ತುತ್ತಾಗಿದ್ದಾರೆ.
ಆರೋಗ್ಯ ಇಲಾಖೆಯು 166 ರೋಗಿಗಳ ಮೇಲೆ ಈ ಅಧ್ಯಯನವನ್ನು ನಡೆಸಿದ್ದು, ಈ ವೇಳೆ ಎಟಿಎಂ ಮೂಲಕ ಸೋಂಕು ಹರಡಿರುವುದು ಸ್ಪಷ್ಟಗೊಂಡಿದೆ. ಈ ಪ್ರದೇಶದ ಒಬ್ಬರು ಆಶಾ ಕಾರ್ಯಕರ್ತೆ ಆರೋಗ್ಯ ಇಲಾಖೆ ಪತ್ತೆಹಚ್ಚಿ ಗುರುತಿಸಿದ ಎಟಿಎಂ ಕೌಂಟರ್ ಗೆ ಭೇಟಿ ನೀಡಿದ್ದರು. ಚಾತ್ತನೂರ್ ಕ್ಲಸ್ಟರ್‍ಗೆ ಸೇರಿದ ಇನ್ನೊಬ್ಬ ರೋಗಿಯು ಭೇಟಿ ನೀಡಿದ ಎಟಿಎಂಗೆ ಆಶಾ ಕಾರ್ಯಕರ್ತರೂ ಭೇಟಿ ನೀಡಿರುವುದನ್ನು ಪತ್ತೆಹಚ್ಚಲಾಗಿದೆ. ಜೊತೆಗೆ ಇದೇ ಎಟಿಎಂ ಬಳಸಿದ ಇನ್ನೊಬ್ಬ ವ್ಯಕ್ತಿಯಲ್ಲಿ ಕೋವಿಡ್ ದೃಢಪಡಿಸಲಾಗಿದೆ. ಇವರ ಪತ್ನಿ ಮತ್ತು ಐದು ತಿಂಗಳ ಮಗುವಿನಲ್ಲೂ ಸೋಂಕು ದೃಢಪಟ್ಟಿದೆ. ಆದರೆ ಈ ಬಗ್ಗೆ ಇನ್ನಷ್ಟು ನಿಖರತೆ ಪಡೆಯಬೇಕಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಎಟಿಎಂ ಸಹಿತ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವವರು ಕಡ್ಡಾಯವಾಗಿ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಜರ್‍ಗಳನ್ನು ಬಳಸಬೇಕೆಂದು ಆರೋಗ್ಯ ಇಲಾಖೆ ನಿರ್ದೇಶನ ನೀಡಿದೆ.
ಈ ಮಧ್ಯೆ ಜೂನ್ 30 ರ ಮೊದಲು ರೋಗದ ಮೂಲವನ್ನು ಪತ್ತೆಹಚ್ಚಲು ಸಾಧ್ಯವಾಗದ 125 ಜನರ ರೋಗ ಬಾಧಿಸುವಿಕೆಯ ಮೂಲವನ್ನು ಗುರುತಿಸಲಾಗಿದೆ ಎನ್ನಲಾಗಿದೆ. ಉಳಿದ 41 ಬಾಧಿತರಿಗೆ ಸೋಂಕು ಹಬ್ಬಿದ ಮಾರ್ಗದ ಬಗ್ಗೆ ವಿಸ್ಕøತ ಅಧ್ಯಯನ ನಡೆಯುತ್ತಿದೆ.
ದಕ್ಷಿಣ ಕೇರಳದಲ್ಲಿ ಸೋಂಕು ಹರಡಲು ಕಾರಣವಾಗುವ ಮೂಲದ ಬಗ್ಗೆ ಸ್ಪಷ್ಟ ಮಾಹಿತಿಗಳಿಲ್ಲದ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಆರೋಗ್ಯ ಇಲಾಖೆಯ ಕಳವಳಕ್ಕೆ ಕಾರಣವಾಗುತ್ತಿದೆ. ತಿರುವನಂತಪುರ, ಪತ್ತನಂತಿಟ್ಟು ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ ಸಮುದಾಯ ಹರಡುವಿಕೆ ತಡೆಗಟ್ಟಲು ಆರೋಗ್ಯ ಇಲಾಖೆ ಶ್ರಮಿಸುತ್ತಿದೆ.


