ಕುಂಬಳೆ: ಜಿಲ್ಲೆಯಲ್ಲಿ ಸಂಪರ್ಕ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಪೈಕಿ ಕುಂಬಳೆ, ಪುತ್ತಿಗೆ, ಬದಿಯಡ್ಕ, ಮಧೂರು ಪಂಚಾಯತಿ ವ್ಯಾಪ್ತಿಗಳಲ್ಲಿ ಸೋಂಕು ಹರಡುವಿಕೆಯ ಮಟ್ಟ ಏರುಗತಿಯಲ್ಲಿದ್ದು ನಿಯಂತ್ರಣಗಳನ್ನು ಏರ್ಪಡಿಸಲಾಗಿದೆ.
ಆದರೆ ಜಿಲ್ಲಾಡಳಿತ ಹೇರುವ ಅರೆಬರೆ ನಿರ್ಧಾರಗಳಿಂದಲೇ ಕೋವಿಡ್ ವ್ಯಾಪಕ ಪ್ರಮಾಣದಲ್ಲಿ ಏರುವಿಕೆ ಕಾಣುತ್ತಿದೆ ಎಂಬ ಮಾತುಗಳು ವಿದ್ಯಮಾನಗಳಿಂದ ಕಂಡುಕೊಳ್ಳಲಾಗಿದೆ.
ಪುತ್ತಿಗೆ, ಕುಂಬಳೆ ಮತ್ತು ಮಧೂರು ಪಂಚಾಯತಿಗಳ ಗಡಿ ಪ್ರದೇಶವಾದ ಸೀತಾಂಗೋಳಿಯಲ್ಲಿ ಜಾರಿಗೊಳಿಸಲಾದ ಅಪಕ್ವ ನಿಯಂತ್ರಣ ಕ್ರಮಗಳು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಸೀತಾಂಗೋಳಿ ಪೇಟೆಯ ಒಂದು ಬದಿಯನ್ನು ಮುಚ್ಚಿ ಮತ್ತೊಂದು ಬದಿಯ ವ್ಯಾಪಾರ ಚಟುವಟಿಕೆಗಳಿಗೆ ದಿನಬಿಟ್ಟು ದಿನ ಎಂಬ ಕ್ರಮದಲ್ಲಿ ಅಪಕ್ವ ಕಾನೂನು ಜಾರಿಗೊಳಿಸಿರುವುದು ಕೋವಿಡ್ ಇನ್ನಷ್ಟು ಹರಡಲಿ ಎಂಬ ಕಾರಣಕ್ಕಾಗಿ ಎಂದು ಜನರು ಸಂಶಯ ವ್ಯಕ್ತಪಡಿಸಿದ್ದಾರೆ. ರಸ್ತೆಯ ಇಕ್ಕೆಲಗಳ ಒಂದು ಬದಿಯನ್ನು ಒಂದು ದಿನ ಮುಚ್ಚಿದೆರೆ ಇನ್ನೊಂದು ಬದಿಯಲ್ಲಿ ವ್ಯಾಪಾರ ವ್ಯವಹಾರಗಳನ್ನು ನಿರಾತಂಕವಾಗಿ ನಡೆಸಲು ಸೂಚಿಸಲಾಗಿದೆ. ಇದರಿಂದ ರಸ್ತೆಯ ಆಚೆಗಿನ ಮುಚ್ಚಲ್ಪಟ್ಟ ಪ್ರದೇಶದಿಂದ ರಸ್ತೆಯನ್ನು ದಾಟಿ ಈಚೆ ಬದಿಗೆ ಬಂದು ಅಂಗಡಿಗಳಲ್ಲಿ ಸುತ್ತಾಡುವುದರಿಂದ ವ್ಯಾಪಕ ಪ್ರಮಾಣದ ಸೋಂಕು ಹರಡುವಿಕೆಗೆ ಕಾರಣವಾಗಬಹುದೆಂಬ ಕನಿಷ್ಠ ಅರಿವು ಅಧಿಕಾರಿಗಳಿಲ್ಲವೇ ಎಂಬ ಸಂಶಯ ಮೂಡಿದೆ. ಬೆಳಿಗ್ಗೆ ಮತ್ತು ಸಂಜೆ ವೇಳೆ ಕಿಕ್ಕಿರಿದು ಸೇರುವ ಜನರು ಸಾಮಾಜಿಕ ಅಂತರಗಳನ್ನು ಮರೆತು ಒತ್ತೊತ್ತಾಗಿ ಅಂಗಡಿ ಮುಗ್ಗಟ್ಟುಗಳ ಎದುರು ಜಮಾಯಿಸುವುದರಿಂದ ತೀವ್ರ ಸೋಂಕಿನ ಸಾಧ್ಯತೆ ಕಂಡುಬಂದಿದ್ದು ಅಧಿಕೃತರು ಮೌನವಾಗಿರುವುದು ಸಂಶಗಳಿಗೆ ಕಾರಣವಾಗಿದೆ. ಕಳೆದ ಮೂರು ದಿನಗಳಿಂದ ಇಂತಹ ಕಾನೂನು ಜಾರಿಯಲ್ಲಿದ್ದು ಅಧಿಕಾರಿಗಳ ಅಪಕ್ವ ನಿರ್ಧಾರಗಳು ಸಜ್ಜನ ಜನರ ತಲೆಕೆಡಲು ಕಾರಣವಾಗಿದೆ.


