ಕುಂಬಳೆ: ನಿತ್ಯ ಉದ್ಯೋಗಿಗಳು ಸಹಿತ ಕೇರಳದ ಯಾರೂ ಕರ್ನಾಟಕಕ್ಕೆ ಹೋಗಬಾರದು ಎಂಬ ಕೇರಳ ಸರಕಾರದ ದಿಢೀರ್ ನಿರ್ಧಾರವು ಜನವಿರೋಧಿಯಾಗಿದ್ದು, ಇದನ್ನು ತತ್‍ಕ್ಷಣವೇ ಹಿಂದಕ್ಕೆ ಪಡೆಯಬೇಕೆಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಮಣಿಕಂಠ ರೈ ಆಗ್ರಹಿಸಿದ್ದಾರೆ.
ಕೊರೊನಾ ಹೆಚ್ಚಳಕ್ಕೆ ಸಂಬಂಧಿಸಿ ಜಿಲ್ಲಾಡಳಿತದ ವೈಫಲ್ಯವನ್ನು ಮರೆಮಾಚುವ ಒಂದು ಭಾಗವಾಗಿ ಈ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದ್ದು, ಇದರಿಂದ ಗಡಿನಾಡಿನ ಸಾವಿರಾರು ಮಂದಿಯ ಜೀವನ ಬೀದಿಗೆ ಬರಲಿದೆ. ಕೊರೊನಾ ನಿಯಂತ್ರಣ ಅಗತ್ಯವಾಗಿದ್ದರೂ ಈ ರೀತಿಯ ಅಮಾನವೀಯ ಹಾಗು ಅವೈಜ್ಞಾನಿಕ ಕ್ರಮ ಸಮರ್ಥನೀಯವಲ್ಲ. ಕೇರಳದವರು ಕರ್ನಾಟಕಕ್ಕೆ ಹೋಗಬಾರದು ಎಂದಾದರೆ ಪ್ರಸ್ತುತ ಕರ್ನಾಟಕದಲ್ಲಿ ದುಡಿಯುವವರಿಗೆ ಅದೇ ರೀತಿಯ ಉದ್ಯೋಗವನ್ನು ಕೇರಳ ಸರ್ಕಾರವು ತನ್ನ ನೆಲದಲ್ಲಿ ಮಾಡಿಕೊಡಬೇಕು. ಅದು ಸಾಧ್ಯವಿಲ್ಲ ಎಂದಾದರೆ ಕರ್ನಾಟಕಕ್ಕೆ ಹೋಗುವುದನ್ನು ನಿರ್ಬಂಧಿಸಲು ಸರ್ಕಾರಕ್ಕೆ ಯಾವ ನೈತಿಕ ಹಕ್ಕಿದೆ. ಕರ್ನಾಟಕಕ್ಕೆ ಹೋದವರು 28 ದಿನ ವಾಪಸ್ ಬರಬಾರದು ಎಂಬ ನಿಯಮವು ಮೂರ್ಖತನದ್ದಾಗಿದೆ. ದಿಢೀರ್ ಕರ್ನಾಟಕದಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡುವುದಾದರೂ ಹೇಗೆ ಸಾಧ್ಯ? ಈಗಿನ ಸ್ಥಿತಿಯಲ್ಲಿ ಕರ್ನಾಟಕದಲ್ಲಿ ಕೇರಳದವರಿಗೆ ಬಾಡಿಗೆ ಮನೆಯಾಗಲೀ, ಪಿಜಿಯಾಗಲೀ ಸಿಗುತ್ತಿಲ್ಲ. ಹಾಗಿರುವಾಗ ಕೇರಳ ಸರ್ಕಾರವು ತತ್‍ಕ್ಷಣ ತನ್ನ ನಿರ್ಧಾರವನ್ನು ಪಾಪಸು ಪಡೆಯಬೇಕು. ಇಲ್ಲವಾದಲ್ಲಿ ಬಿಜೆಪಿಯು ಇದರ ವಿರುದ್ಧ ಪ್ರತಿಭಟಿಸಲಿದೆ ಎಂದು ಮಣಿಕಂಠ ರೈ ಮುನ್ನೆಚ್ಚರಿಕೆ ನೀಡಿದ್ದಾರೆ.
ಕಾಸರಗೋಡಿನ ಸಂಸದರು, ಮಂಜೇಶ್ವರದ ಶಾಸಕರು ಸಹಿತ ಪ್ರಮುಖರಿದ್ದ ಸಭೆಯಲ್ಲಿಯೇ ಇಂಥದ್ದೊಂದು ನಿರ್ಧಾರವನ್ನು ಕೈಗೊಂಡಿರುವುದು ಅತೀವ ಆಶ್ಚರ್ಯದ ಸಂಗತಿ. ಇವರಿಗೆ ತಮ್ಮ ವ್ಯಾಪ್ತಿಯ ಜನರ ಸ್ಥಿತಿಗತಿ ತಿಳಿದಿದ್ದರೆ ಖಂಡಿತವಾಗಿಯೂ ಈ ರೀತಿಯ ನಿರ್ಧಾರ ಕೈಗೊಳ್ಳುತ್ತಿರಲಿಲ್ಲ. ಆದ್ದರಿಂದ ಸರ್ಕಾರ ತತ್‍ಕ್ಷಣವೇ ಈ ಸಮಸ್ಯೆಯನ್ನು ಪರಿಹರಿಸಿ ಜನರ ಕಷ್ಟಗಳಿಗೆ ಸ್ಪಂದಿಸಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.

