ಕಾಸರಗೋಡು: ತೆಂಗಿನ ಸಸಿಗಳ ಮಾರಾಟ ನಡೆಸುವ ನೆವದಲ್ಲಿ ಸಾರ್ವಜನಿಕರನ್ನು ವಂಚಿಸುವ ಕೆಲವರು ಜಿಲ್ಲೆಯಲ್ಲಿದ್ದಾರೆ. ಈ ಬಗ್ಗೆ ಜನತೆ ಜಗರೂಕರಾಗಿರಬೇಕೆಂದು ಸಿ.ಪಿ.ಸಿ.ಆರ್.ಐ. ಫಾರಂ ಇನ್‍ಫಾರ್ಮೇಷನ್ ಬ್ಯೂರೋ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಕೇಂದ್ರ ತೋಟ ಬೆಳೆ ಸಂಶೋಧನೆ ಕೇಂದ್ರ (ಸಿ.ಪಿ.ಸಿ.ಆರ್.ಐ.), ಕೃಷಿ ಇಲಾಖೆ ಅಂಗೀಕರಿಸಿರುವ ನರ್ಸರಿಗಳಲ್ಲಿ ಬೆಳೆಸಲಾದ ಅತ್ಯುತ್ತಮ ಫಲ ನೀಡುವ ಸಾಮಥ್ರ್ಯದ ತೆಂಗಿನ ಸಸಿಗಳೆಂದು ತಿಳಿಸಿ ಕಳಪೆ ಗುಣಮಟ್ಟದ ತೆಂಗಿನ ಸಸಿಗಳನ್ನು ಕೆಲವರು ಕಾಸರಗೋಡು ಜಿಲ್ಲೆಯ ವಿವಿಧೆಡೆ ಮಾರಾಟ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಸಿ.ಪಿ.ಸಿ.ಆರ್.ಐ. ಉತ್ಪಾದಿಸುವ ತೆಂಗಿನ ಸಸಿಗಳು ಕಾಸರಗೋಡು ಮತ್ತು ಕಾಯಂಕುಳಂ ಫಾರಂಗಳ ಮೂಲಕ, ಕೃಷಿ ಇಲಾಖೆಯ ವಿವಿಧ ಫಾರಂಗಳಲ್ಲಿ ಉತ್ಪಾದಿಸಿದ ತೆಂಗಿನ ಸಸಿಗಳು ಆಯಾ ಕೇಂದ್ರಗಳ ಮೂಲಕ, ಕೃಷಿ ಭವನಗಳ ಮೂಲಕ ವಿತರಣೆ ನಡೆಸಲಾಗುತ್ತಿದೆ. ಸದ್ರಿ ತೆಂಗಿನ ಕಾಯಿ ಅಭಿವೃದ್ಧಿ ಮಂಡಳಿ ವತಿಯಿಂದ ಕೃಷಿ ಇಲಾಖೆ ಜಾರಿಗೊಳಿಸುತ್ತಿರುವ 'ಕೇರ ಕೇರಳಂ ಸಮೃದ್ಧ ಕೇರಳಂ' ಪ್ರಕಾರ ಉತ್ತಮ ಗುಣಮಟ್ಟದ ತೆಂಗಿನ ಸಸಿಗಳು ಆಯಾ ಕೃಷಿ ಭವನಗಳಲ್ಲಿ ವಿತರಣೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿ.ಪಿ.ಸಿ.ಆರ್.ಐ/ಕೃಷಿ ಇಲಾಖೆ ಅಂಗೀಕೃತ ಎಂಬ ಹೆಸರಲ್ಲಿ ತೆಂಗಿನ ಸಸಿ ಮಾರಾಟ ನಡೆಸಿ ವಂಚನೆ ಮಾಡುತ್ತಿರುವವರ ಬಲೆಗೆ ಸಾರ್ವಜನಿಕರು ಬಲಿಯಾಗಬಾರದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.





