ಕಾಸರಗೋಡು: ಬಂದಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರ ರಾಜ್ಯ ಸರಕಾರದ ಆರ್ದ್ರಂ ಯೋಜನೆಯ ಗುಣಮಟ್ಟಕ್ಕೇರಲಿದೆ.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ಕಾಸರಗೋಡು ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳನ್ನು ಆದ್ರರ್ಂ ಗುಣಮಟ್ಟಕ್ಕೇರಿಸುವ ಯೋಜನೆಯ ಅಂಗವಾಗಿ ಇದು ನಡೆಯಲಿದೆ. ಈ ನಿಟ್ಟಿನಲ್ಲಿ ಬಂದಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಾಗಿ ನೂತನ ಕಟ್ಟಡ ನಿರ್ಮಾಣಕ್ಕೆ ಆಡಳಿತೆ ಮಂಜೂರಾತಿ ಲಭಿಸಿದೆ.
1.83 ಕೋಟಿ ರೂ. ಈ ಯೋಜನೆಗಾಗಿ ಮೀಸಲಿರಿಸಲಾಗಿದೆ. ಶಾಸಕ ಕೆ. ಕುಂಞ ರಾಮನ್ ಅವರು ಸ್ಥಳೀಯ ಅಭಿವೃದ್ಧಿ ನಿಧಿಯಿಂದ 10 ಲಕ್ಷ ರೂ. ಬಂದದಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ವಿಶೇಷ ಬ್ಲೋಕ್ ನಿರ್ಮಾಣಕ್ಕಾಗಿ ಮಂಜೂರು ಮಾಡಲಾಗಿದೆ. ಕುತ್ತಿಕೋಲ್ ಗ್ರಾಮಪಂಚಾಯತ್ ನ ಪಾಲು ರೂಪದಲ್ಲಿ 5 ಲಕ್ಷ ರೂ., ಉಳಿದ 168 ಲಕ್ಷ ರೂ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನ ನಿಧಿಯಿಂದ ಒದಗಿಸಲಾಗುವುದು.
ಇಲ್ಲಿ ನಿರ್ಮಿಸಲಾಗುವ ಎರಡು ಅಂತಸ್ತಿನ ಕಟ್ಟಡದಲ್ಲಿ ಮೂರು ಹೊರರೋಗಿ ಕೊಠಡಿಗಳು, ಎರಡು ನಿಗಾ ಕೊಠಡಿಗಳು, ದಂತ ಹೊರರೋಗಿ ವಿಭಾಗ, ವಿಶೇಷ ಹೊರರೋಗಿ ವಿಭಾಗ, ಹೊರರೋಗಿ ನೋಂದಣಿ ಕೊಠಡಿ, ಡ್ರೆಸ್ಸಿಂಗ್ ಕೊಠಡಿ, ಪ್ರಯೋಗಾಲಯ, ಮಕ್ಕಳಿಗೆ ಹಾಲುಣಿಸುವ ಕೊಠಡಿ, ಔಷಧಾಲಯ ಸಹಿತ ಎಲ್ಲ ವಿಧಧ ಸೌಲಭ್ಯಗಳು ಇರುವುವು.
ಸಾರ್ವಜನಿಕರನ್ನು ಮತ್ತು ಮಕ್ಕಳನ್ನು ಹೊರರೋಗಿ ಬ್ಲೋಕ್ ಗೆ ಆಗಮಿಸುವ ರೋಗಿಗಳಿಂದ ದೂರವಿರಿಸುವ ನಿಟ್ಟಿನಲ್ಲಿ ಮೊದಲ ಅಂತಸ್ತಿನಲ್ಲಿ ಸಾರ್ವಜನಿಕ ಆರೋಗ್ಯ ವಿಭಾಗ ಎಂಬ ಸೌಲಭ್ಯ ಸಜ್ಜುಗೊಳಿಸಲಾಗುವುದು.
ಲೋಕೋಪಯೋಗಿ ಇಲಾಖೆ ಕಟ್ಟಡ ವಿಭಾಗ ಕಾರ್ಯಕಾರಿ ಇಂಜಿನಿಯರ್ ಈ ಯೋಜನೆ ಜಾರಿಗೊಳಿಸಲಿದ್ದಾರೆ. ಈ ಯೋಜನೆಯಲ್ಲಿ ನೂತನ ಬ್ಲಾಕ್ ನಿರ್ಮಾಣದ ಜೊತೆಗೆ ಪ್ರತ್ಯೇಕ ತ್ಯಾಜ್ಯ ವಿಲೇವಾರಿ ಸೌಲಭ್ಯ ಅಳವಡಿಸಲಾಗುವುದು.
ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಜಿಲ್ಲಾ ಮಟ್ಟದ ಸಭೆಯಲ್ಲಿ ಯೋಜನೆಗೆ ಆಡಳಿತೆ ಮಂಜೂರಾತಿ ನೀಡಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಅಧ್ಯಕ್ಷತೆ ವಹಿಸಿದ್ದರು.
ಬಂದಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರ ಆರ್ದ್ರಂ ಗುಣಮಟ್ಟಕ್ಕೇರುವ ಮೂಲಕ ಸ್ಥಳೀಯ ನಿವಾಸಿಗಳಿಗೆ ತುಂಬ ಪ್ರಯೋಜನವಾಗಲಿದೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ತಿಳಿಸಿರುವರು.


