ಕುಂಬಳೆ: ಪುತ್ತಿಗೆ ಗ್ರಾಮ ಪಂಚಾಯತಿಯಲ್ಲಿ ಕುಟುಂಬಶ್ರೀಯ ಆರ್ಥಿಕ ಭ್ರಷ್ಟಾಚಾರದಲ್ಲಿ ಆಡಳಿತ ಪಕ್ಷದ ಕೈವಾಡ ಇದೆ ಎಂದು ಆರೋಪಿಸಿ ಸೋಮವಾರ ಬಿಜೆಪಿ ಮಂಡಲ ಸಮಿತಿ ನೇತೃತ್ವದಲ್ಲಿ ಪುತ್ತಿಗೆ ಗ್ರಾ.ಪಂ. ಕಾರ್ಯಾಲಯದ ಎದುರು ಧರಣಿ ಪ್ರತಿಭಟನೆ ನಡೆಯಿತು.
ಬಿಜೆಪಿ ಉತ್ತರ ವಲಯ ಉಪಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿ, ಕುಟುಂಬಶ್ರೀ ನಡೆಸಿದ ಭ್ರಷ್ಟಾಚಾರ ಹಗರದ ಹಿಂದೆ ಗ್ರಾ.ಪಂ. ಆಡಳಿತದ ಕೃಪೆ ಇರುವುದು ಖಚಿತ ಎಂದ ಅವರು ಕೇವಲ ಉದ್ಯೋಗಸ್ಥರನ್ನು ದೂಷಿಸಿ ಮತ್ತು ಅವರನ್ನು ವಜಾ ಮಾಡಿ ಕೈ ತೊಳೆದು ಕುಳಿತುಕೊಂಡಲ್ಲಿ ಬಿಜೆಪಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು. ಆಡಳಿತ ಪಕ್ಷದ ಜನ ಪ್ರತಿನಿಧಿಗಳ ಕೈವಾಡ ಇರುವುದರಿಂದ ಇದನ್ನು ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದು ಆಗ್ರಹಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಮಣಿಕಂಠ ರೈ ಪಟ್ಲ ಅವರು ಮಾತನಾಡಿ ಪುತ್ತಿಗೆ ಪಂಚಾಯತಿ ಅಭಿವೃದ್ಧಿ ಇಲ್ಲದೆ ಇರುವುದರ ಹಿಂದೆ ಭ್ರಷ್ಟಾಚಾರದ ಹಿನ್ನಲೆ ಇರುವುದರಿಂದಾಗಿ ಆಗಿದೆ. ಕುಟುಂಬಶ್ರೀ ಹಣದ ಹಗರಣದಲ್ಲಿ ಸಿಪಿಎಂ ಪಾತ್ರ ಖಚಿತವಿದ್ದು ಈ ಕಾರಣದಿಂದ ಸಿಪಿಎಂ ಮೌನ ವಹಿಸಿರುವುದಾಗಿ ಮಣಿಕಂಠ ರೈ ಆರೋಪಿಸಿದರು.
ಒಬಿಸಿ ಮಂಡಲ ಪ್ರದಾನ ಕಾರ್ಯದರ್ಶಿ ಅನಿಲ್ ಮಣಿಯಂಪಾರೆ ಮಾತನಾಡಿ, ಕೇರಳ ಸರ್ಕಾರವೇ ಭ್ರಷ್ಟಾಚಾರ ದಲ್ಲಿ ಮುಳುಗಿರುವಾಗ ಅವರನ್ನು ಅನುಸರಿಸುವ ಪುತ್ತಿಗೆ ಪಂಚಾಯತಿ ಭ್ರಷ್ಟಾಚಾರ ಮಾಡದಿರಲು ಸಾಧ್ಯವೇ ಎಂದು ಲೇವಡಿ ಮಾಡಿದರು. ಅಭಿವೃದ್ಧಿ ಶೂನ್ಯ ಪುತ್ತಿಗೆ ಗ್ರಾಮ ಪಂಚಾಯತಿ ಈ ರೀತಿ ಹಣವನ್ನು ಕೊಳ್ಳೆ ಹೊಡೆದರೆ ಅಭಿವೃದ್ಧಿಯಾಗಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಸಭೆಯನ್ನು ಉದ್ದೇಶಿಸಿ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಜಯಂತ ಪಾಟಾಳಿ ಮಾತನಾಡಿ ಪುತ್ತಿಗೆ ಗ್ರಾಮ ಪಂಚಾಯತಿಯಲ್ಲಿ ಈ ಹಿಂದೆ ನಡೆದ ಭ್ರಷ್ಟಾಚಾರವನ್ನು ಎಳೆ ಎಳೆ ಯಾಗಿ ಬಿಡಿಸಿಟ್ಟರು.
ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ಪುತ್ತಿಗೆ ಪಂಚಾಯತಿ ಅಧ್ಯಕ್ಷ ಪದ್ಮನಾಭ ಆಚಾರ್ಯ ಬಾಡೂರು ವಹಿಸಿದ್ದರು. ಸಭೆಯಲ್ಲಿ ಬಿಜೆಪಿ ಮಂಡಲ ಕಾರ್ಯದರ್ಶಿ ಸಂತೋಷ್ ದೈಗೋಳಿ, ಎಸ್ ಸಿ ಮೋರ್ಚಾ ನೇತಾರ ಶಶಿ ಮೊದಲಾದ ನೇತಾರರು ಉಪಸ್ಥಿತರಿದ್ದರು. ವಿಶ್ವನಾಥ ಸ್ವಾಗತಿಸಿ, ಸ್ವಾಗತ್ ವಂದಿಸಿದರು.



