ಕಾಸರಗೋಡು: ಲಡಾಕ್ ಸಂಘರ್ಷಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿಯ ವಿರುದ್ದ ಪೇಸ್ ಬುಕ್ ಪೋಸ್ಟ್ ಹರಡಿದ ಮಿಲ್ಮಾ ಉದ್ಯೋಗಿಯೊಬ್ಬರನ್ನು ವೃತ್ತಿಯಿಂದ ವಜಾ ಮಾಡಲಾದ ಘಟನೆ ನಡೆದಿದೆ.
ನೌಕರನನ್ನು ವಜಾಗೊಳಿಸುವಂತೆ ಒತ್ತಾಯಿಸಿ ಯುವ ಮೋರ್ಚಾ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ ಬೆನ್ನಿಗೆ ಮಿಲ್ಮಾ ತನ್ನ ನಿರ್ಧಾರ ಪ್ರಕಟಿಸಿ ಆದೇಶ ನೀಡಿದೆ. ಪುಲ್ಲೂರ್ ವನ್ನಾರ್ ಬಯಲಿನ ನಿವೃತ್ತ ಸೈನಿಕ ಬಾಬುರಾಜ್ ಅವರು ಫೇಸ್‍ಬುಕ್‍ನಲ್ಲಿ ಪ್ರಧಾನಿಯನ್ನು ದೂಷಿಸಿ ಪೋಸ್ಟ್ ಹಂಚಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ತನ್ನ ಭದ್ರತಾ ಕರ್ತವ್ಯದಿಂದ ವಜಾ ಮಾಡಲಾಗಿದೆ ಎಂದು ಮಿಲ್ಮಾದ ಕಾಸರಗೋಡು ಡೈರಿ ಡೆವೆಲಪ್ ಮೆಂಟ್ ಪ್ರಬಂಧಕ ಕೆ.ಎಸ್.ಗೋಪಿ ಹೇಳಿದರು.
ಕಳೆದ ಎರಡು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಬಾಬುರಾಜ್ ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದನು. ಖಾಸಗೀ ಸೆಕ್ಯೂರಿಟಿ ಏಜೆನ್ಸಿಯ ಮೂಲಕ ಕಾಞಂಗಾಡ್ ಆನಂದಾಶ್ರಮದ ಮಿಲ್ಮಾ ಡೈರಿಗೆ ಸಿಬ್ಬಂದಿಯಾಗಿ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದನು.
ಕೋವಿಡ್ ನಿಯಮಗಳನ್ನು ಪಾಲಿಸದೆ ಈ ಸಂಬಂಧ ಪ್ರತಿಭಟನಾ ಮೆರವಣಿಗೆ ನಡೆಸಿದ 12 ಬಿಜೆಪಿ ಕಾರ್ಯಕರ್ತರ ಮೇಲೆ ಕೋವಿಡ್ ನಿಯಂತ್ರಕ ಕಾನೂನನ್ವಯ ದೂರುದಾಖಲಿಸಲಾಗಿದೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈಶಾಕ್ ಕೋಳೋಟ್, ಉಪಾಧ್ಯಕ್ಷ ಶ್ರೀಜಿತ್ ಪರಕ್ಕಳಾಯ್, ಮಂಡಲಂ ಪ್ರಧಾನ ಕಾರ್ಯದರ್ಶಿ ಶರದ್ ಮರಕ್ಕಾಪ್, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರಾದ ರವೀಂದ್ರನ್ ಮಾವುಂಗಾಲ್ ಮತ್ತು ಎಂ ಪ್ರದೀಪನ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಹೊಸದುರ್ಗ ಠಾಣಾ ಸಬ್ ಇನ್ಸ್‍ಪೆಕ್ಟರ್ ಕೆ.ಪಿ. ವಿನೋದ್ ನೇತೃತ್ವದ ಪೆÇಲೀಸರ ತಂಡ ಪ್ರತಿಭಟನಾ ಸ್ಥಳಕ್ಕೆ ತಲಪಿ ಕ್ರಮಕೈಗೊಂಡಿತು. ಬಾಬುರಾಜ್ ವಿರುದ್ಧ ಪ್ರಕರಣಕ್ಕೆ ಒತ್ತಾಯಿಸಿ ಯುವ ಮೋರ್ಚಾ ಜಿಲ್ಲಾ ಪೆÇಲೀಸ್ ಮುಖ್ಯಸ್ಥರಿಗೆ ದೂರು ನೀಡಿತ್ತು.


