ಬದಿಯಡ್ಕ: ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ವಾಚನ ಪಕ್ಷಾಚರಣೆ ಸಮಾರೋಪ ಕಾರ್ಯಕ್ರಮವು ಏತಡ್ಕ ಸಮಾಜ ಮಂದಿರದಲ್ಲಿ ಮಂಗಳವಾರ ಜರಗಿತು. ಲೇಖಕ ಚಂದ್ರಶೇಖರ ಏತಡ್ಕ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಓದುವಿಕೆಯ ಮಹತ್ವವನ್ನು ತಮ್ಮದೇ ಉದಾಹರಣೆಗಳೊಂದಿಗೆ ವಿಷದೀಕರಿಸಿದರು. ಬಾಲ್ಯದಲ್ಲಿ ಓದುವಿಕೆಯ ಬಗ್ಗೆ ಅನಾಸಕ್ತಿ ಸಲ್ಲದು ಎಂದ ಅವರು ಓದುವಿಕೆ ಜೀವನದ ದಿಕ್ಕನ್ನೇ ಬದಲಿಸಬಹದು ಎಂಬುದನ್ನು ಪ್ರಸಿದ್ಧ ಬರಹಗಾರರ ಉಕ್ತಿಗಳೊಂದಿಗೆ ವಿವರಿಸಿದರು. ಉತ್ತಮ ಬರಹಗಾರನಾಗಬೇಕಾದರೆ ಒಳ್ಳೆಯ ಓದುಗನೂ ಆಗಿರಬೇಕು ಎಂದು ಕಿವಿಮಾತು ಹೇಳಿದರು. ಪುಸ್ತಕ ಜೊತೆಯಲ್ಲಿ ಇದ್ದರೆ ಒಳ್ಳೆಯ ಸ್ನೇಹಿತನಿದ್ದಂತೆ ಎಂದು ಹೇಳಿದರು.
ವಾಚನ ಪಕ್ಷಾಚರಣೆಯ ಸಂದರ್ಭದಲ್ಲಿ ನಡೆಸಿದ ವಾಟ್ಸಪ್ ರಸಪ್ರಶ್ನೆ ಸ್ಪರ್ಧೆ ಮತ್ತು ಓದಿದ ಪುಸ್ತಕದ ಟಿಪ್ಪಣಿ ಬರೆಯುವ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮುಖ್ಯ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು. ಅನುಷಾನಾಥ್, ಶ್ರೀನಿಕಾ, ಅರ್ಪಿತಾ, ರಾಜಲಕ್ಷ್ಮಿ, ದೀಪ್ತಿ, ತನುಷಾನಾಥ್, ಅನ್ವಿತಾ ಸ್ವರಚಿತ ಕವನ, ಭಾವಗೀತೆ, ಜಾನಪದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಅರ್ಪಿತಾ ಮತ್ತು ದೀಪ್ತಿ ಓದಿನ ಟಿಪ್ಪಣಿಗಳನ್ನು ವಾಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಂಥಾಲಯದ ಅಧ್ಯಕ್ಷ ಕೆ. ನರಸಿಂಹ ಭಟ್ ಮಾತನಾಡಿ ವಾಚನ ಪಕ್ಷದಲ್ಲಿ ನಡೆಸಿದ ಕಾರ್ಯಕ್ರಮಗಳ ಅವಲೋಕನ ನಡೆಸಿದರು. ಕೇರಳ ರಾಜ್ಯ ಗ್ರಂಥಾಲಯ ಕೌನ್ಸಿಲ್ ನ ಪ್ರಥಮ ಕಾರ್ಯದರ್ಶಿಯಾಗಿದ್ದ ಐ.ವಿ.ದಾಸ್ ಅವರ ಜನ್ಮದಿನದ ಪ್ರಯುಕ್ತ ಅವರ ಸಂಸ್ಮರಣೆ ಮಾಡಿದರು.ಲೇಖಕರೂ,ಹಲವಾರು ಗ್ರಂಥಾಲಯಗಳ ಸ್ಥಾಪನೆಗೆ ಕಾರಣಕರ್ತರೂ ಆಗಿದ್ದ ಐ.ವಿ.ದಾಸ್ ಅವರ ಸಂಸ್ಮರಣೆ ಔಚಿತ್ಯಪೂರ್ಣ ಎಂದರು. ಶ್ರೀನಿಕಾ ಪ್ರಾರ್ಥನೆ ಹಾಡಿ, ಉಪಾಧ್ಯಕ್ಷ ವೈ.ಕೆ. ಗಣಪತಿ ಭಟ್ ಸ್ವಾಗತಿಸಿ, ಕಾರ್ಯದರ್ಶಿ ಕೆ. ಸುಬ್ರಹ್ಮಣ್ಯ ಭಟ್ ವಂದಿಸಿದರು.


