ನವದೆಹಲಿ. ತಿರುವನಂತಪುರದ ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆಯನ್ನು ಎನ್ ಐ ಎಗೆ ವಹಿಸಲು ಗೃಹ ಸಚಿವಾಲಯ ಅನುಮತಿ ನೀಡಿದೆ.
ಕಳ್ಳಸಾಗಾಣಿಕೆ ರಾಷ್ಟ್ರೀಯ ಭದ್ರತೆಗೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇತರ ಪ್ರಾಥಮಿಕ ತನಿಖೆಗಳು ಪೂರ್ಣಗೊಳ್ಳುತ್ತಿರುವಂತೆ ಕೇಂದ್ರ ಗೃಹ ಸಚಿವಾಲಯ ಇಂತಹದೊಂದು ಮಹತ್ವದ ನಿರ್ಧಾರಪ್ರಕಟಿಸಿದೆ.
ಬುಧವಾರ ಮುಖ್ಯಮಂತ್ರಿ ಈ ವಿಷಯಕ್ಕೆ ಸಂಬಂಧಿಸಿ ಸಮಗ್ರ ತನಿಖೆಗೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ನೀಡಿದ್ದರು. ಘಟನೆಗೆ ಸಂಬಂಧಿಸಿ ವಿವಿಧ ದೃಷ್ಟಿಕೋನಗಳ ತನಿಖೆ ಅಗತ್ಯವಿದೆಯೆಂದೂ ಈ ನಿಟ್ಟಿನ ತುರ್ತು ಕ್ರಮಗಳ ಅಗತ್ಯವನ್ನೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದರು. ಕೇಂದ್ರ ಸರ್ಕಾರದ ಎಲ್ಲಾ ತನಿಖಾ ಸಂಸ್ಥೆಗಳನ್ನೂ ಸಮನ್ವಯಗೊಳಿಸಿ ಪರಿಣಾಮಕಾರಿ ತನಿಖೆ ನಡೆಸಲು ತುರ್ತು ಅಗತ್ಯವಿದೆ ಎಂದು ವಿವರಿಸಿದ್ದರು.
ಎನ್ ಐ ಎ ತನಿಖೆಯಲ್ಲಿ ಚಿನ್ನ ಎಲ್ಲಿಂದ ಬಂತು ಮತ್ತು ಯಾರಿಗಾಗಿ ಸಾಗಿಸಲ್ಪಟ್ಟಿತು ಎಂಬ ಮಾಹಿತಿ ಒಳಗೊಂಡಿರುತ್ತದೆ. ಪ್ರಧಾನಿಗೆ ಬರೆದ ಪತ್ರದಲ್ಲಿ ರಾಜ್ಯ ಸರ್ಕಾರವು ತನಿಖೆಯಲ್ಲಿ ಎಲ್ಲ ನೆರವು ಮತ್ತು ಬೆಂಬಲವನ್ನು ನೀಡುವುದಾಗಿ ಹೇಳಲಾಗಿದೆ.
ಜುಲೈ 4 ರಂದು ತಿರುವನಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುಎಇಯಿಂದ ರಾಜತಾಂತ್ರಿಕ ಪ್ಯಾಕೇಜ್‍ನಲ್ಲಿ ಆಗಮಿಸಿದ ಅಕ್ರಮ ಚಿನ್ನವನ್ನು ಕಸ್ಟಮ್ಸ್ ವಶಪಡಿಸಿಕೊಂಡಿತ್ತು. ಈ ಘಟನೆಯೊಂದಿಗೆ ಮುಖ್ಯಮಂತ್ರಿ ಕಚೇರಿಗೆ ಸಂಬಂಧವಿದೆ ಎಂದು ಆರೋಪಿಸಿದಾಗ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ರಾಷ್ಟ್ರೀಯ ಗಮನ ಸೆಳೆದಿದ್ದವು. ಪ್ರಧಾನ ಆರೋಪಿ ಎನ್ನಲಾದ ಯುಎಇ ಮಾಜಿ ಕಾನ್ಸುಲೇಟ್ ಉದ್ಯೋಗಿ ಸ್ವಪ್ನಾ ಸುರೇಶ್ ಪರಾರಿಯಾಗಿದ್ದಾರೆ.


