ಕೊಚ್ಚಿ: ಇಂಧನ ಬೆಲೆ ಏರಿಕೆಯನ್ನು ವಿರೋಧಿಸಿ ಮೋಟಾರು ಕಾರ್ಮಿಕರ ಜಂಟಿ ಮುಷ್ಕರ ಸಮಿತಿ (ಎಫ್‍ಯುಟಿಎ) ನೇತೃತ್ವದಲ್ಲಿ ನಾಳೆ(ಜುಲೈ 10) ರಾಜ್ಯಾದ್ಯಂತ ಮೋಟಾರು ವಾಹನ ಮುಷ್ಕರ ನಡೆಯಲಿದೆ. ಮುಷ್ಕರವು ಇಂಧನ ಬೆಲೆಗಳನ್ನು ನಿಯಂತ್ರಿಸಬೇಕು ಮತ್ತು ಆಟೋ-ಟ್ಯಾಕ್ಸಿ ದರಗಳನ್ನು ಹೆಚ್ಚಿಸುವ ಬೇಡಿಕೆಗಳೊಂದಿಗೆ ನಡೆಯಲಿದೆ. ಮುಷ್ಕರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ನಡೆಯಲಿದೆ.
ಪೆಟ್ರೋಲಿಯಂ ನ್ನು ಜಿಎಸ್‍ಟಿ ವ್ಯಾಪ್ತಿಗೆ ಒಳಪಡಿಸಬೇಕು, ಪೆಟ್ರೋಲ್ ಮತ್ತು ಡೀಸೆಲ್ ಟ್ಯಾಕ್ಸಿ ವಾಹನಗಳಿಗೆ ಸಬ್ಸಿಡಿ ನೀಡಬೇಕು, ಆಟೋ ಟ್ಯಾಕ್ಸಿ ದರ ಹೆಚ್ಚಳಗೊಳಿಸಬೇಕು ಮತ್ತು ಪೆಟ್ರೋಲ್, ಡೀಸೆಲ್ ಬೆಲೆಯನ್ನು ನಿಯಂತ್ರಿಸಬೇಕು ಎಂಬ ಬೇಡಿಕೆಗಳನ್ನು ಸಂಯುಕ್ತ ಟ್ರೇಡ್ ಯೂನಿಗಳು ಸರ್ಕಾರದ ಮುಂದಿರಿಸಿದೆ.
ಮುಷ್ಕರವನ್ನು ಯಶಸ್ವಿಗೊಳಿಸಬೇಕೆಂದು ಕೇರಳ ರಾಜ್ಯ ಮೋಟಾರು ಸಾರಿಗೆ ಕಾರ್ಮಿಕರ ಸಮನ್ವಯ ಸಮಿತಿ ಜನರಿಗೆ ಮನವಿ ಮಾಡಿದೆ. ಜೂನ್ 28 ರಂದು ನಡೆದ ಸಂಯುಕ್ತ ಮುಷ್ಕರ ಸಮಿತಿ ಸಭೆಯಲ್ಲಿ ಮುಷ್ಕರ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಷ್ಕರದ ಪೂರ್ವಭಾವಿಯಾಗಿ ಜುಲೈ 6 ರಂದು ಆಟೋ ಟ್ಯಾಕ್ಸಿ ಚಾಲಕರು ಕರಿದಿನವಾಗಿ ಆಚರಿಸಿದ್ದರು.


