ತಿರುವನಂತಪುರ: ಕೊರೊನಾ ಕ್ವಾರಂಟೈನ್ ಉಲ್ಲಂಘಿಸಿ ಹೇಳದೆ-ಕೇಳದೆ ಉದ್ಯೋಗದ ಸ್ಥಳದಿಂದ ನಿರ್ಗಮಿಸಿದ ಕಾರಣ ಅಮಾನತಿಗೊಳಗಾಗಿದ್ದ ಯುವ ಐಎಎಸ್ ಅಧಿಕಾರಿ ಅನುಪಮ್ ಮಿಶ್ರಾ ಅವರನ್ನು ಆಲಪ್ಪುಳ ಜಿಲ್ಲಾ ಉಪ ಜಿಲ್ಲಾಧಿಕಾರಿಯಾಗಿ ಮತ್ತೆ ಸೇವೆಗೆ ನೇಮಿಸಲಾಗಿದೆ. ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿ ಕೇರಳದಿಂದ ತಮ್ಮ ಊರಾದ ಉತ್ತರ ಪ್ರದೇಶಕ್ಕೆ ತೆರಳಿದ್ದ ಅಧಿಕಾರಿ ಬಳಿಕ ಉನ್ನತಾಧಿಕಾರಿಗಳಿಗೆ ನೀಡಿದ ವಿವರಣೆಯು ತೃಪ್ತಿಕರವಾಗಿಲ್ಲವಾದರೂ, ಮಿಶ್ರಾ ವಿರುದ್ಧದ ವಿಚಾರಣೆಯನ್ನು ಯುವ , ಅನನುಭವಿ ಎಂಬ ಆಧಾರದ ಮೇಲೆ ಹಿಂತೆಗೆಯಲಾಗಿದೆ.
ಅನುಪಮ್ ಮಿಶ್ರಾ ಅವರು ಕೊಲ್ಲಂ ಉಪ ಜಿಲ್ಲಾಧಿಕಾರಿಯಾಗಿದ್ದಾಗ ಕ್ವಾರಂಟೈನ್ ಉಲ್ಲಂಘಿಸಿ ತಮ್ಮ ಅಧಿಕೃತ ನಿವಾಸದಿಂದ ನಾಪತ್ತೆಯಾಗಿದ್ದರು.
ಅನುಪಮ್ ಮಿಶ್ರಾ ಅವರು 2016 ನೇ ಸಾಲಿನ ಐಎಎಸ್ ಬ್ಯಾಚ್ ಅಧಿಕಾರಿ. ಉತ್ತರ ಪ್ರದೇಶದ ಸುಲ್ತಾನಪುರ ಮೂಲದವರು. ಮದುವೆಯ ಬಳಿಕ ಮಧುಚಂದ್ರಕ್ಕಾಗಿ ಸಿಂಗಾಪುರ ಮತ್ತು ಇಂಡೋನೇಷ್ಯಾಕ್ಕೆ ಭೇಟಿ ನೀಡಿದ ಬಳಿಕ ಅವರು ಮಾರ್ಚ್ 18 ರಂದು ಕೊಲ್ಲಂಗೆ ಮರಳಿದ್ದರು.
ಆದರೆ ಅಷ್ಟರಲ್ಲಿ ಕೇರಳದಲ್ಲಿ ಕೋವಿಡ್ ಗಂಭೀರತೆಗಳು ಆರಂಭಗೊಂಡಿತ್ತು. ಅವರು ಮಾರ್ಚ್ 19 ರಿಂದ ತಮ್ಮ ಅಧಿಕೃತ ನಿವಾಸದಲ್ಲಿ ಕ್ವಾರಂಣಟೈನ್ ಗೆ ಒಳಗಾಗಿದ್ದರು. ಅವರ ಆರೋಗ್ಯದ ಬಗ್ಗೆ ವಿಚಾರಿಸಲು ಅಧಿಕಾರಿಗಳು ಬಂದಾಗ ಉಪ-ಜಿಲ್ಲಾಧಿಕಾರಿ ನಿವಾಸದಲ್ಲಿ ಇರಲಿಲ್ಲ. ನಂತರ ಮೊಬೈಲ್ ಫೆÇೀನ್‍ನಲ್ಲಿ ಸಂಪರ್ಕಿಸಲಾಯಿತು. ಕರೆ ಮಾಡಿದಾಗ, ತಾನು ಬೆಂಗಳೂರಿನಲ್ಲಿರುವೆ ಎಂದು ಹೇಳಲಾಗಿದ್ದರೂ ಮೊಬೈಲ್ ಟವರ್ ಸ್ಥಳ ಕಾನ್ಪುರ ಎಂದು ತಿಳಿಸುತ್ತಿತ್ತು. ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿದಾಗ ಅವರು ಊರಿಗೆ ತೆರಳಿರುವುದು ಗಮನಕ್ಕೆ ಬಂತು. ನಂತರ ಅನುಪಮ್ ಮಿಶ್ರಾ ಅವರನ್ನು ಅಮಾನತುಗೊಳಿಸಲಾಗಿತ್ತು.
ಅನುಪಮ್ ಮಿಶ್ರಾ ವಿರುದ್ದ ಈ ಹಿಂದೆಯೂ ಆರೋಪಗಳು ಕೇಳಿಬಂದಿದ್ದವು. ತೈಕಾಟ್ ಅತಿಥಿಗೃಹದ ವಿಳಾಸದಲ್ಲಿ ಕೋವಿ ಖರೀದಿಸುವ ಪರವಾನಗಿ ಪಡೆಯುವ ಪ್ರಯತ್ನಗಳು ವಿವಾದಾಸ್ಪದವಾಗಿದ್ದವು.


