ಕಾಸರಗೋಡು: ಕೋವಿಡ್ ಜಾಗೃತಿ ಸಂದೇಶಗಳನ್ನು ಹೊಂದಿರುವ ಹಲವಾರು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಕಾಸರಗೋಡಿನ ಒಂದನೇ ತರಗತಿ ವಿದ್ಯಾರ್ಥಿಯೊಬ್ಬನ 'ಮೋಟೂಸ್' ಯೂಟ್ಯೂಬ್ ವಿಡಿಯೋ ವೈರಲ್ ಆಗುತ್ತಿದೆ. ಕೋವಿಡ್ ರಕ್ಷಣಾ ಸಂದೇಶಗಳನ್ನು ವಿಭಿನ್ನ ಶೈಲಿಯಲ್ಲಿ ಸಾರ್ವಜನಿಕರಿಗೆ ತಲುಪಿಸುವ ಮೋಟೂಸ್ ಯೂಟ್ಯೂಬ್ ಸರಣಿಯು ಈಗಾಗಲೇ 42 ಸಂಚಿಕೆಗಳ ಮೂಲಕ ಸಾಗಿದೆ. ಮಡಿಕೈ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿ ದೇವರಾಜ ಪ್ರೇಕ್ಷಕರ ಮನಗೆಲ್ಲುವಲ್ಲಿ ಗಮನ ಸೆಳೆದಿದ್ದಾನೆ.
ಕೋವಿಡ್ ರಕ್ಷಣಾ ಜಾಗೃತಿಗಾಗಿ ಕೈ ತೊಳೆಯುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಆರೋಗ್ಯ ಇಲಾಖೆಯ ಸೇವೆಗಳು, ಮಾಧ್ಯಮ ಕ್ಷೇತ್ರದ ಉದ್ಯೋಗಿಗಳು, ಕಾನೂನು ಜಾರಿ ಮಾಡುವವರು, ಮತ್ತು ಇತರ ಸ್ವಯಂಸೇವಕರ ಕೊಡುಗೆಗಳನ್ನು ತನ್ನದೇ ಆದ ಶೈಲಿಯಲ್ಲಿ ಮೋಟೋಸ್ ಮೂಲಕ ಈ ಪುಟಾಣಿ ಪ್ರಸ್ತುತಪಡಿಸಿದ್ದಾನೆ. ಯೂಟ್ಯೂಬ್ ಸರಣಿಯ ಚಿತ್ರೀಕರಣ ಸ್ಥಳ, ಕ್ಯಾಮೆರಾ ಮತ್ತು ವೀಡಿಯೋ ಸಂಪಾದನೆಯನ್ನು ಬಾಲಕನ ತಂದೆ, ಕಾಂಜಿರಪಾಯಿಲ್ ಫ್ರೌಢಶಾಲಾ ಶಿಕ್ಷಕರೂ ಆದ ಕೆ.ವಿ.ರಾಜೇಶ್ ನಿರ್ವಹಿಸಿದ್ದಾರೆ.
ಪುಟಾಣಿಯ ತಾಯಿ ಪ್ರತಿ ಸರಣಿಯ ಕಥೆ-ಸಂಭಾಷಣೆಗಳನ್ನು ಬರೆದು ನಿರ್ದೇಶಿಸಿದ್ದಾರೆ. ಸೋದರಿ ದೇವಿಕಾ ರಾಜ್ ಕೂಡ ತಾಂತ್ರಿಕ ನೆರವಿನೊಂದಿಗೆ ಸಹಕರಿಸಿದ್ದಾಳೆ. ಯೂಟ್ಯೂಬ್ ಸರಣಿಯ 25 ನೇ ಸಂಚಿಕೆಯ ಅಂತ್ಯದ ವೇಳೆಗೆ, ದೇವರಾಜ್ ತನ್ನ ಯೂಟ್ಯೂಬ್ ವಿವ್ವಿಂಗ್ ಉಳಿತಾಯ ಮೊತ್ತವನ್ನು ಮುಖ್ಯಮಂತ್ರಿಯ ವಿಪತ್ತು ಪರಿಹಾರ ನಿಧಿಗೆ ಹಸ್ತಾಂತರಿಸಿದ್ದನು. ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಶಿಕ್ಷಣ ಸಚಿವ ಸಿ ರವೀಂದ್ರನಾಥ್ ಮತ್ತು ಕಂದಾಯ ಸಚಿವ ಇ ಚಂದ್ರಶೇಖರನ್ ಸೇರಿದಂತೆ ಅನೇಕ ರಾಜಕೀಯ ಮತ್ತು ಸಾಮಾಜಿಕ ಕಾರ್ಯಕರ್ತರು ಬಾಲಕನ ಸಾಧನೆಗೆ ಬೆನ್ನುತಟ್ಟಿ ಪ್ರೋತ್ಸಾಹಿಸಿ ಅಭಿನಂದಿಸಿರುವರು.



