ಪೆರ್ಲ: ಎಣ್ಮಕಜೆ ಗ್ರಾ.ಪಂ. ಬಜಕ್ಕೂಡ್ಲು ಪರಿಸರದ ಎರಡು ಎಕ್ರೆಗಳಷ್ಟು ಬಂಜರು ಭೂಮಿಯಲ್ಲಿ ಚಿನ್ನದ ಬೆಳೆ ತೆಗೆಯಲು ಸೇ.ಸ. ಬ್ಯಾಂಕ್ ಮುಂದೆಬಂದಿದೆ.
ಆಹಾರ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ಕೇರಳ ಸರ್ಕಾರ ಪ್ರಾರಂಭಿಸಿರುವ 'ಸುಭಿಕ್ಷ ಕೇರಳ' ಅಭಿಯಾನದ ಅಂಗವಾಗಿ ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ನೇತೃತ್ವದಲ್ಲಿ ಬಜಕ್ಕೂಡ್ಲಿನ 2 ಎಕ್ರೆಗಳಷ್ಟು ಬಂಜರು ಭೂಮಿಯನ್ನು ಭತ್ತದ ಬೆಳೆ ವ್ಯವಸಾಯದ ಮೂಲಕ ಆದಾಯದ ನೆಲೆಯೊದಗಿಸಲು ತೀರ್ಮಾನಿಸಲಾಯಿತು. ಕೃಷಿ ಅಧಿಕಾರಿ ವಿನೀತ್ ವಿ ವರ್ಮಾ ಅವರು ಸೇವಾ ಸಹಕಾರಿ ಬ್ಯಾಂಕ್ನ ಕನಸಿಗೆ ಬಲ ನೀಡಿ ಸಹಕರಿಸುತ್ತಿರುವರು. ಭತ್ತದ ಕೃಷಿ ಮತ್ತು ಹೊಲದಲ್ಲಿ ನೀರು ಒಟ್ಟಾಗಿಸುವ ಅಗತ್ಯದ ಕೆಲಸ ಕಾರ್ಯಗಳಿಗೆ ಕೃಷಿ ಅಧಿಕಾರಿ ಸಲಹೆಗಳನ್ನು ನೀಡುತ್ತಿದ್ದಾರೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾರದಾ ವೈ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ, ವಾರ್ಡ್ ಸದಸ್ಯ ಬಿ ಉದಯ ಚೆಟ್ಟಿಯಾರ್, ಸದಸ್ಯ ಪುಟ್ಟಪ್ಪ, ಬ್ಯಾಂಕ್ ಅಧ್ಯಕ್ಷ ಶಶಿಭೂಷಣ್ ಶಾಸ್ತ್ರಿ, ಬ್ಯಾಂಕ್ ನ ನಿರ್ದೇಶಕರ ಮಂಡಳಿಯ ಸದಸ್ಯರು, ನೌಕರರು ಮತ್ತು ಸ್ಥಳೀಯ ರೈತರು ಭತ್ತದ ತೆನೆ ನೆಟ್ಟು ಕೃಷಿಗೆ ಚಾಲನೆ ನೀಡಿದರು. ಇತರರಿಗೆ ಮಾದರಿಯಾದ ಎಣ್ಮಕಜೆ ಸೇವಾ ಸಹಕಾರಿ ಬ್ಯಾಂಕಿನ ಯತ್ನ ಜನಮನ್ನಣೆಗೆ ಒಳಗಾಗಿದೆ.


