ಕಾಸರಗೋಡು: ಉತ್ತರ ಕೇರಳದಲ್ಲಿ ದೈವನರ್ತನ ಆಚರಣೆಗಳಿಗೆ ಜೀವತೇದ ಖ್ಯಾತ ಕಲಾವಿದ ಅರೋತ್ ಬಾಲನ್ ಪಣಿಕ್ಕರ್ (80) ಗುರುವಾರ ನಿಧನರಾದರು. ವಯೋಸಹಜ ಅನಾರೋಗ್ಯಕ್ಕೊಳಗಾಗಿದ್ದ ಅವರು ಸ್ವಗೃಹದಲ್ಲಿ ಕೊನೆಯುಸಿರೆಳೆದರು. 12 ರ ಹರೆಯದಲ್ಲಿ ಪೆರುಂತೋಟ್ಟ ಚಾಮುಂಡಿಯ ಕೇಶ ವಿನ್ಯಾಸಕನಾಗಿ ದೈವ ಆರಾಧನಾ ಕ್ಷೇತ್ರಕ್ಕೆ ಪ್ರವೇಶಿಸಿದ್ದರು.
ತನ್ನ 17 ನೇ ವಯಸ್ಸಿನಲ್ಲಿ ಅಧಿಕೃತವಾಗಿ ದೈವನರ್ತನಕ್ಕೆ ಸಂಬಂದಿಸಿ ರೇಷ್ಮೆ ಬಟ್ಟೆಗಳು ಮತ್ತು ಕಡಗಗಳನ್ನು ಮಾರಾಟಮಾಡುವ ಉದ್ಯಮಕ್ಕಿಳಿದು ಯಶಸ್ವಿಯೂ ಆಗಿದ್ದರು. ಅವರು 1965 ರಲ್ಲಿ ಅರುವತ್ ಶ್ರೀಸುಬ್ರಹ್ಮಣ್ಯ ದೇವಾಲಯದ ಅಂಕೆಯಲ್ಲಿರುವ ತಾಂತ್ರಿಕ ಚಾವಾಡಿಯಲ್ಲಿ ನಡೆದ ಪೆರುಂಕಳಿಯಾಟದಲ್ಲಿ ಮೊದಲ ಬಾರಿ ದೈವನರ್ತಕನಾಗಿ ಪಾದಾರ್ಪಣೆಗೈದರು. ಪಣಿಕ್ಕರ್ ಅವರ ವಿಷ್ಣುಮೂರ್ತಿ ದೈವ, ಮೂವಾಳಂಕುಳ ಚಾಮುಂಡಿ, ರಕ್ತ ಚಾಮುಂಡಿ, ರಕ್ತೇಶ್ವರಿ ಸಹಿತ ಅನೇಕ ದೈವ ನರ್ತನಗಳು ದೇಶಾದ್ಯಂತ ಖ್ಯಾತಿ ಗಳಿಸಿದೆ.
ಪನೆಯಾಲ್ ನಲ್ಲಿ ವಾಸಿಸುತ್ತಿದ್ದ ಅವರು ಪತ್ನಿ, ಇಬ್ಬರು ಪುತ್ರರು, ಪುತ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.


