HEALTH TIPS

ಕಾಸರಗೋಡು ಜಿಲ್ಲೆಯ ಪ್ರಥಮ ಸ್ಥಳೀಯ ಜೀವ ವಿವಿಧತೆಯ ಸಾಂಸ್ಕøತಿಕ ತಾಣವಾಗಿರುವ ಕಾನತ್ತೂರಿನ ನೈಯಂ ಕಯಂ ಎಂಬ ನಿಸರ್ಗ ಧಾಮ


           ಕಾಸರಗೋಡು: ಕಾಸರಗೋಡು ಕಾನತ್ತೂರಿನ ನೈಯಂ ಕಯಂ ಎಂಬ ಜಲರಾಶಿ ಸಹಿತದ ನಿಸರ್ಗ ಧಾಮ ಕಾಸರಗೋಡು ಜಿಲ್ಲೆಯ ಪ್ರಥಮ ಸ್ಥಳೀಯ ಜೀವ ವಿವಿಧತೆಯ ಸಾಂಸ್ಕೃತಿಕ (ಪರಂಪರಾಗತ) ತಾಣ(ಲೋಕಲ್ ಬಯೋ ಡೈವರ್ಸಿಟಿ ಹೆರಿಟೇಜ್) ಆಗಿದೆ.
          ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಅರೆಬಿ ಸಮುದ್ರಕ್ಕೆ ಸೇರುವ ಪಯಸ್ವಿನಿ ನದಿಯ ಪಥದಲ್ಲಿ ಆಳವಾದ ಭಾಗವನ್ನು ಹೊಂದಿರುವ ತಾಣವೇ ಮುಳಿಯಾರು ಗ್ರಾಮ ಪಂಚಾಯತ್ ನ ಕಾನತ್ತೂರಿನಲ್ಲಿರುವ ಈ ನೈಂ ಕಯಂ. ಕಡು ಬೇಸಗೆಯಲ್ಲೂ ಬತ್ತದ ಸಮೃದ್ಧ ಜಲರಾಶಿ, ಕರ್ಗಲ್ಲ ಪಾರೆ ಪ್ರದೇಶದಲ್ಲೂ ಹಬ್ಬಿದ ಹಸುರಿನ ಬನಸಿರಿ, ಸ್ವಚ್ಚಂದವಾಗಿ ವಿಹರಿಸುವ ಜೀವ ಜಾಲ..ಹೀಗೆ ಅನೇಕ ಸುವಿಶೇಷತೆಗಳು ಇಲ್ಲಿವೆ. ಪಯಸ್ವಿನಿ ನದಿಯಲ್ಲಿ ಸುಮಾರು 25 ಮೀಟರ್ ಆಳ ಹೊಂದಿರುವ ನೈಯಂ ಕಯಂ ಸುಮಾರು ಅರ್ಧ ಎಕ್ರೆ ವಿಸ್ತೀರ್ಣವನ್ನು ಹೊಂದಿದೆ. ಇಲ್ಲಿನ ಪ್ರಾಕೃತಿಕ ವಿಶೇಷತೆಗಳ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಮೊದಲ ಜೈವಿಕ ವಿವಿಧತೆಯ ಪರಂಪರಾಗತ ಕೇಂದ್ರ ಇದುವೇ ಆಗಿದೆ.
        ಸ್ಥಳೀಯ ಮತ್ತು ಅತ್ಯಪೂರ್ವ ಮೀನು ಸಂತತಿ, ಔಷಧೀಯ ಸಸ್ಯಗಳು, ಪ್ರಾಣಿ ಸಂಕುಲ ಇತ್ಯಾದಿಗಳು ಇಲ್ಲಿನ ವನಸಿರಿಯ ಪರಂಪರೆಯನ್ನು ಕಾಯ್ದುಕೊಂಡು ಬಂದಿವೆ ಎಂದು ಮುಳಿಯಾರು ಗ್ರಾಮಪಂಚಾಯತ್ ಅಧ್ಯಕ್ಷ ಖಾಲಿದ್ ಬೆಳ್ಳಿಪ್ಪಾಡಿ ಅಭಿಪ್ರಾಯಪಡುತ್ತಾರೆ.
      ಇಂದು ಜಗತ್ತಿನ ಬಹುತೇಕ ಕಡೆ ಪ್ರಾಣಿ-ಪಕ್ಷಿ ಸಂಕುಲಗಳು ವಿನಾಶದ ಭೀತಿಯಲ್ಲಿರುವ ವೇಳೆ ಸ್ಥಳೀಯ ಜೈವಿಕ ವಿವಿಧತೆಯ ಈ ತಾಣವನ್ನು ಯಥಾವತ್ತಾಗಿ ಸಂರಕ್ಷಿಸಬೇಕಾದ ಮತ್ತು ದೊಡ್ಡ ಮಟ್ಟದಲ್ಲಿ ಪರಂಪರಾಗತ ಕೇಂದ್ರವಾಗಿ ಘೋಷಿಸಬೇಕಾದ ಅಗತ್ಯವಿದೆ. ಈ ಹೊಣೆಗಾರಿಕೆಯನ್ನು ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದ ಜೈವ ವೈವಿಧ್ಯ ಪೆÇೀಷಣೆ ಸಮಿತಿ(ಬಿ.ಎಂ.ಸಿ.) ಹೊಂದಿದೆ. 
      ಕಳೆದ ವರ್ಷ ನೈಯಂಕಯಂ ನ ಅಪೂರ್ವ ಮೀನುಗಳು ಸಾಮೂಹಿಕವಾಗಿ ಮೃತಪಟ್ಟ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮುಳಿಯಾರು ಗ್ರಾಮಪಂಚಾಯತ್ ನ ಬಿ.ಎಂ.ಸಿ.ಯ ನೇತೃತ್ವದಲ್ಲಿ ರಾಜ್ಯ ಜೈವಿಕ ವಿವಿಧತೆ ಮಂಡಳಿ, ಕೇರಳ ಮೀಸಲು ಅರಣ್ಯ ಇನ್ಸ್ ಸ್ಟಿಟ್ಯೂಟ್ ಇತ್ಯಾದಿಗಳ ಪರಿಣತ ತಂಡ ಇಲ್ಲಿಗೆ ಭೇಟಿ ನೀಡಿ, ತಪಾಸಣೆ ನಡೆಸಿತ್ತು. ಇವರು ಸಿದ್ಧಪಡಿಸಿರುವ ಜೈವಿಕ ವಿವಿಧತೆ ಅಧ್ಯಯನ ವರದಿಯ ಹಿನ್ನೆಲೆಯಲ್ಲಿ ರಾಜ್ಯ ಜೈವಿಕ ವಿವಿಧತೆ ಮಂಡಳಿ ಈ ಪ್ರದೇಶವನ್ನು ಪರಪರಾಗತ ಕೇಂದ್ರ ಎಂದು ಘೋಷಿಸಿತ್ತು.
                  ಪರಂಪರೆ ಮತ್ತು ಪ್ರಾಚೀನ ಮಾಹಿತಿಗಳ ಸಂರಕ್ಷಣೆ:
    ಸ್ಥಳೀಯ ಮಟ್ಟದ ಪ್ರಾಚೀನ ಕೃಷಿ ಸಂಸ್ಕಾರ, ಜಾನಪದೀಯ ಮಾಹಿತಿ ಇತ್ಯಾದಿಗಳ ಸಂಗ್ರಹವೂ ಈ ವೇಳೆ ನಡೆದು ಪರಂಪರಾಗತ ಕೇಂದ್ರದ ಸಂರಕ್ಷಣೆ ನಡೆಯಬೇಕಿದೆ.
ಈ ಪ್ರದೇಶದ ಸುಮಾರು 50 ಎಕ್ರೆ ಜಾಗವನ್ನು ಖಾಸಗಿ ವ್ಯಕ್ತಿಗಳು ಹೊಂದಿದ್ದಾರೆ. ಈ ಜಾಗದಲ್ಲಿ ಕೃಷಿ ಪ್ರಧಾನವಾಗಿ ನಡೆದುಬರುತ್ತಿದೆ. ಅನೇಕ ಕುಟುಂಬಗಳು ಪರಂಪರಾಗತ ರೀತಿ ಕೃಷಿ ಕಾಯಕವನ್ನು ನಂಬಿ ಬದುಕುತ್ತಿವೆ. ಅಡಕೆ, ತೆಂಗು, ಬಾಳೆ, ಸುವರ್ಣ ಗೆಡ್ಡೆ, ಮರಗೆಣಸು ಇಲ್ಲಿನ ಪ್ರಧಾನ ಬೆಳೆಗಳು. ನೈಯಂಕಯಂ ಜಲರಾಶಿಯ ತಟಿಯಲ್ಲಿ ಸಮೃದ್ಧವಾದ ಕುದುರುಕಾಡು ಬೆಳೆದಿದ್ದು, ಸ್ಥಳಿಯ ಜನರು ಅದನ್ನು ಬಹಳ ಜತನದಿಂದ ಸಂರಕ್ಷಿಸಿಕೊಂಡು ಬಂದಿದ್ದಾರೆ.
                 ವೃಕ್ಷಾರಾಧನೆ:
      ನದಿ ತಟದಲ್ಲಿ ಬೃಹತ್ ಮರ "ಕೊಯಂಬುನ್ನ" (ಇದು ಸ್ಥಳೀಯರು ಈ ಮರಕ್ಕೆ ಇರಿಸಿರುವ ನಾಮಧೇಯ) ಇಲ್ಲಿನ ಜನತೆಯ ಆರಾಧನೆಯ ಕೇಂದ್ರವಾಗಿದೆ. ಪ್ರತಿ ವರ್ಷ ಎರಡು ದಿನಗಳ ಕಾಲ ಈ ಮರದ ಬುಡದಲ್ಲಿ ದೀಪಬೆಳಗಿ, ಎಳನೀರು ನೈವೇದ್ಯ ಸಲ್ಲಿಸುವ ಸಂಪ್ರದಾಯ ಇಲ್ಲಿ ಮುಂದುವರಿದುಕೊಂಡುಬಂದಿದೆ. ಇಲ್ಲಿನ ಜೀವರಾಶಿಯನ್ನು ಯಾವುದೇ ತೊಂದರೆಯಿಲ್ಲದೆ ಕಾಪಾಡಿಕೊಂಡು ಬಂದಿರುವ ದೈವಿಕಶಕ್ತಿಯನ್ನು ಈ ಮರ ಹೊಂದಿದೆ ಎಂಬುದು ಇಲ್ಲಿನ ಜನತೆಯ ವಿಶ್ವಾಸ. ಈ ಮೂಲಕ ಇಲ್ಲಿನ ಪ್ರಕೃತಿಗೆ ಪೂರಕವಾಗಿ ಸ್ಥಳೀಯ ಮಂದಿ ಬದುಕಿಕೊಂಡು ಬಂದಿದ್ದಾರೆ. ನಿಸರ್ಗಕ್ಕೆ ಧಕ್ಕೆ ತರುವ ಯಾವ ಕ್ರಮವೂ ಇಲ್ಲಿ ನಡೆಯುವುದಿಲ್ಲ.
                 ಅಪೂರ್ವ ಜೀವ ಸಂಕುಲ:
     ಮುಷು, ಬ್ರಾಲ್ ಸಹಿತ 22 ವಿಧದ ಅಪೂರ್ವ ಮೀನು ಜಾತಿಗಳು ಇಲ್ಲಿವೆ. 35 ಕಿಲೋ ಭಾರದ ಪಾಲಪ್ಪೂವನ್ ಎಂಬ ಜಾತಿಯ ಆಮೆ ಜಾತಿ, 6 ವಿಧದ ಚಿಟ್ಟೆಗಳು, 12 ವಿಧದ ಪಕ್ಷಿಗಳು, ಮೂರು ವಿಧದ ಸಸ್ತನಿಗಳು, ಹಲವು ಜಾತಿಯ ಏಡಿಗಳು, ಎಂಡೆಮಿಕ್ ವಿಭಾಗಕ್ಕೆ ಸೇರಿದ 111 ವಿಧದ ಸಸ್ಯಗಳು, 80 ವಿಧಧ ಔಷಧೀಯ ಸಸ್ಯಗಳು ಇಲ್ಲಿವೆ. ತಲಾ 200 ಗ್ರಾಂ ತೂಕದ ದೊಡ್ಡ ಸಿಗಡಿಗಳು ಕೆಲವು ವರ್ಷಗಳ ಹಿಂದಿನ ವರೆಗೆ ಇಲ್ಲಿದ್ದು, ಈಗ ಕಣ್ಮರೆಯಾಗಿವೆ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ. ಇಂಥಾ ಅಪೂರ್ವ ನಿಸರ್ಗ ಪರಂಪರೆ ಹೊಂದಿರುವ ನೈಯಂ ಕಯಂ ಭೂಮಿಗೊಂದು ವರದಾನವೇ ಆಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries