ಮುಳ್ಳೇರಿಯ: ವಿಶೇಷ ರೀತಿ ತಯಾರಿಸಲಾದ ಡೈರಿಗಳ ವಿತರಣೆ ಕಾರ್ಯಕ್ರಮ ಬೋವಿಕ್ಕಾನದಲ್ಲಿ ಸೋಮವಾರ ಜರಗಿತು.
ಕೋವಿಡ್ 19 ಸೋಂಕು ಹರಡುತ್ತಿರುವ ಸಂದರ್ಭದಲ್ಲಿ ಆರೋಗ್ಯ ಇಲಾಖೆಗೆ ಸಹಾಯ ಮಾಡುವ ಉದ್ದೇಶದಿಂದ ಇರಿಯಣ್ಣಿ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ವಿ.ಎಚ್.ಎಸ್.ಇ. ವಿಭಾಗದ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಸಾರ್ವಜನಿಕ ಸಂಪರ್ಕ ಪಟ್ಟಿ ಸಿದ್ಧಪಡಿಸಲು ಪೂರಕವಾಗುವ ರೀತಿ ಸಿದ್ಧಪಡಿಸಲಾದ ಡೈರಿಗಳನ್ನು ವಿತರಣೆ ನಡೆಸಿದರು. ಮುಳಿಯಾರು ಗ್ರಾಮಪಂಚಾಯತ್ ನ ಸುಮಾರು 300 ಅಂಗಡಿಗಳಿಗೆ, ಆಟೋ, ಟ್ಯಾಕ್ಸಿ ಚಾಲಕರಿಗೆ ಈ ಡೈರಿಗಳನ್ನು ವಿತರಿಸಲಾಯಿತು.
ಬೋವಿಕ್ಕಾನ ಪೇಟೆಯಲ್ಲಿ ನಡೆದ ಸಮಾರಂಭದಲ್ಲಿ ಆದೂರು ಠಾಣೆಯ ಎಸ್.ಐ. ರತ್ನಾಕರನ್ ಅವರಿಗೆ ಡೈರಿ ಹಸ್ತಾಂತರಿಸುವ ಮೂಲಕ ಮುಳಿಯಾರು ಗ್ರಾಮಪಂಚಾಯತ್ ಅಧ್ಯಕ್ಷ ಖಾಲಿದ್ ಬೆಳ್ಳಿಪ್ಪಾಡಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಕೆ.ಪ್ರಭಾಕರನ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಕೆ.ಸುರೇಂದ್ರನ್, ಆರೋಗ್ಯ ಮೇಲ್ವಿಚಾರಕಿ ಎ.ಕೆ.ಹರಿದಾಸ್, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಪಿ.ಚೆರಿಯಾನ್, ವಿವಿಧ ವಿಭಾಗಗಳ ಪ್ರಾಂಶುಪಾಲರಾದ ಪ್ರೇಮರಾಜನ್ ಪಿ.ಕೆ., ಸುಚೀಂದ್ರನಾಥ್ ಪಿ., ಕಾರ್ಯಕ್ರಮ ಅಧಿಕಾರಿ ಶ್ಯಾಮಲಾ ಕೆ. ಉಪಸ್ಥಿತರಿದ್ದರು.

