ಪೆರ್ಲ: ಕಳೆದ ಸಪ್ಟೆಂಬರ್ 14 ರಂದು ಹಾವು ಕಡಿದು ಮರಣ ಹೊಂದಿದ ಎಣ್ಮಕಜೆ ಪಂಚಾಯತಿಯ ಕಜಂಪಾಡಿ ಕಾಲನಿಯ ಕಾಂತಪ್ಪ - ಕುಸುಮ ದಂಪತಿಗಳ ಎರಡು ವರ್ಷದ ಬಾಲಕ ದೀಪಕ್ ಕುಟುಂಬಕ್ಕೆ ಹಾಗೂ ಕಾಲನಿಯಲ್ಲಿ ವಾಸಯೋಗ್ಯವಲ್ಲದ ಎಲ್ಲಾ ಗುಡಿಸಲುಗಳನ್ನು ಪಿ.ಎಂ.ಜಿ.ಎಸ್.ವೈ ಯೋಜನೆಯಲ್ಲಿ ಒಳಪಡಿಸಿ ಹೊಸ ಮನೆ ನಿರ್ಮಾಣಮಾಡಿ ಕೊಡಲು ಮಕ್ಕಳ ಹಕ್ಕು ಆಯೋಗ ನಿರ್ದೇಶನ ನೀಡಿದೆ.
ವರ್ಷಗಳ ಹಿಂದೆ ಮಂಜೇಶ್ವರ ಶಾಸಕರ ನಿಧಿಯಿಂದ ಸ್ಥಾಪಿಸಲಾದ ಮಿನಿಹೈಮಾಸ್ಟ್ ಲೈಟ್ ನ್ನು ಕಾರ್ಯಗತಗೊಳಿಸಬೇಕೆಂದು ಪಂಚಾಯತಿ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ. ಕಾಲೊನಿ ಪರಿಸರದಲ್ಲಿ ಇರುವ ಕುಟುಂಬ ಕ್ಷೇಮ ಕೇಂದ್ರ ವನ್ನು ಕಾರ್ಯಾರಂಭಗೊಳಿಸಲು ಹಾಗೂ ಕಾಸರಗೋಡು ಜಿಲ್ಲೆಯ ಯಾವೆಲ್ಲಾ ಆಸ್ಪತ್ರೆಗಳಲ್ಲಿ ವಿಷಜಂತು ಪ್ರತಿರೋಧ ಚಿಕಿತ್ಸೆ ಇರುವುದರ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಲು ಕ್ರಮ ಕೈಗೊಳ್ಳಲು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸೂಚಿಸಿದೆ.ಕಾಂತಪ್ಪವರ ಸೊತ್ತುಗಳನ್ನು ಪಾಲುಮಾಡಿ ಹಕ್ಕುದಾರರಿಗೆ ನೀಡಲು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೂ ಆದೇಶ ನೀಡಿದೆ. ಆದೇಶದ ಮೇಲೆ ಕೈಗೊಂಡ ಕ್ರಮಗಳ ಬಗ್ಗೆ 2020 ಸೆಪ್ಟೆಂಬರ್ 30 ರೊಳಗೆ ಕೈಗೊಂಡ ಕ್ರಮದ ಬಗ್ಗೆ ವರದಿ ನೀಡಲು ಆಯೋಗ ಸೂಚಿಸಿದೆ.
ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಕಾರ್ಯಾಚರಿಸುವ ಎನ್.ಜಿ. ಒ ಸಂಘಟನೆ ಚೈಲ್ಡ್ ಪೆÇ್ರಟೆಕ್ಟ್ ಟೀಮ್ ನ ಮಗುವಿನ ದಾರುಣ ಮರಣದ ನಂತರ ಕಾಲೊನಿಗೆ ಭೇಟಿ ನೀಡಿ ಕಾಲೊನಿ ದುರವಸ್ಥೆಯ ಬಗ್ಗೆ ಮುಖ್ಯಮಂತ್ರಿ ಹಾಗೂ ಮಾನವ ಹಕ್ಕು ಆಯೋಗಕ್ಕೂ ದೂರನ್ನು ನೀಡಿತ್ತು. ಸಂಘಟನೆಯ ನಿರಂತರ ಪ್ರಯತ್ನ ಫಲವಾಗಿ ಕುಟುಂಬಕ್ಕೆ ಬಿಪಿಎಲ್ ಕಾರ್ಡ್ ಹಾಗೂ ಅರಣ್ಯ ಇಲಾಖೆಯಿಂದ ಒಂದು ಲಕ್ಷ ರೂಪಾಯಿ ಪರಿಹಾರ ಧನ ದೊರೆಯುವಂತಾಗಿದೆ. ಸಂಘಟನೆಯ ನೇತೃತ್ವದಲ್ಲಿ ಮನೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ.
ಶಾಸಕರ ಅನುದಾನದಿಂದ ಕಾಲನಿಯಲ್ಲಿ ಸ್ಥಾಪಿಸಲಾದ ಮಿನಿ ಹೈಮಾಸ್ಟ್ ಲೈಟ್ ನ್ನು ಕಳೆದ ತಿಂಗಳಲ್ಲಿಯೇ ಪಂಚಾಯತಿ ಅಧ್ಯಕ್ಷೆ ಶಾರದಾ ವೈ ಉದ್ಘಾಟಿಸಿದ್ದರು.
ಜಿಲ್ಲಾ ಚೈಲ್ಡ್ ಲೈನ್ ಅಧಿಕಾರಿ, ಎಣ್ಮಕಜೆ ಪಂಚಾಯತಿ ಕಾರ್ಯದರ್ಶಿ, ಕಾಸರಗೋಡು ಜಿಲ್ಲಾಧಿಕಾರಿ, ಕಾಸರಗೋಡು ಜಿಲ್ಲಾ ವೈದ್ಯಾಧಿಕಾರಿ ದೂರಿನ ಪ್ರತಿಕಕ್ಷಿಗಳಾಗಿದ್ದರು.ಚೈಲ್ಡ್ ಪೆÇ್ರಟೆಕ್ಟ್ ಟೀಮ್ ಗಾಗಿ ರಾಜ್ಯಾಧ್ಯಕ್ಷ ಸಿಕೆ ನಾಸರ್ ಕಾಞಂಗಾಡ್ ನೀಡಿದ ಅರ್ಜಿಯಲ್ಲಿ ಮಕ್ಕಳ ಹಕ್ಕು ಆಯೋಗ ಸದಸ್ಯ ಪಿ.ವಿ. ಫಿಲಿಪ್ ಆದೇಶ ನೀಡಿದ್ದಾರೆ.





