ಬದಿಯಡ್ಕ: ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಏತಡ್ಕ ಸಮಾಜ ಮಂದಿರದಲ್ಲಿ ಸೋಮವಾರ ಗ್ರಂಥಾಲಯ ದಿನವನ್ನು ಆಚರಿಸಲಾಯಿತು. ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗಿರೀಶ್ ಎನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಅವರು ಮಾತನಾಡಿ ಗ್ರಂಥಾಲಯ ದಿನಾಚರಣೆಯ ಮಹತ್ವ ವನ್ನು ತಿಳಿಸಿದರು. ಇಂದಿನ ಕಾಲಘಟ್ಟದಲ್ಲೂ ಗ್ರಂಥಾಲಯಗಳು ಪ್ರಸಕ್ತಿಯನ್ನು ಕಳೆದುಕೊಂಡಿಲ್ಲ.ದಿನಾಚರಣೆಗಳಿಗೆ,ಅಭಿಪ್ರಾಯ ವಿನಿಮಯಕ್ಕೆ ಇಂತಹ ಸಂಘಟನೆಗಳು ಅಗತ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಳೆದ ಸುಮಾರು 55 ವರ್ಷಗಳಿಂದ ಈ ಗ್ರಂಥಾಲಯದ ಸದ್ಬಳಕೆ ಮಾಡಿಕೊಳ್ಳುತ್ತಿರುವ ಈಶ್ವರಿ ಭಟ್ ಆನೆಪಳ್ಳ ಅವರನ್ನು ಶಾಲು ಹೊದಿಸಿ ಪುಸ್ತಕ ನೀಡಿ ಗೌರವಿಸಲಾಯಿತು.ಅವರು ಗೌರವಾರ್ಪಣೆಗೆ ಕೃತಜ್ಞತೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗ್ರಂಥಾಲಯದ ಅಧ್ಯಕ್ಷ ಕೆ.ನರಸಿಂಹ ಭಟ್ ಮಾತನಾಡಿ ವಿವಿಧ ಚಟುವಟಿಕೆಗಳ ವಿವರ ನೀಡಿದರು. ಉಪಾಧ್ಯಕ್ಷ ವೈ.ಕೆ ಗಣಪತಿ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಕೆ. ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು. ಡಾ.ವೇಣುಗೋಪಾಲ ಕಳೆಯತ್ತೋಡಿ ವಂದಿಸಿದರು. ಬೆಳಗ್ಗೆ ಗ್ರಂಥಾಲಯದ ಧ್ವಜಾರೋಹಣ ಮಾಡಲಾಯಿತು.





