ಮಂಜೇಶ್ವರ: ಸ್ದಳಿಯಾಡಳಿತ ಸಂಸ್ಥೆಗಳ ಯೋಜನಾ ಮೊತ್ತ ಕಡಿತಗೊಳಿಸಿದ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರದ ಜನದ್ರೋಹ ನೀತಿಯನ್ನು ಖಂಡಿಸಿ ಎಲ್ಲಾ ಗ್ರಾಮ ಪಂಚಾಯತು ಕಛೇರಿ ಮುಂಭಾಗದಲ್ಲಿ ಕಾಂಗ್ರೆಸ್ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದು, ಮಂಗಲ್ಪಾಡಿ ಪಂಚಾಯತು ಕಛೇರಿ ಮುಂಭಾಗದಲ್ಲಿ ಮಂಗಳವಾರ ಧರಣಿ ನಡೆಯಿತು.
ಮಂಡಲ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ನಡೆದ ಧರಣಿಯನ್ನು ಕಾಸರಗೋಡು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಎಡರಂಗ ಸರ್ಕಾರ ಲೂಟಿ ಮಾಡಿ ಜೇಬು ತುಂಬಿಸಿಕೊಳ್ಳುವುದರಲ್ಲಿಯೇ ಮಗ್ನವಾಗಿದ್ದು, ಇಲ್ಲಿ ಯಾವುದೇ ಅಭಿವೃದ್ಧಿ ನಡೆಯುತ್ತಿಲ್ಲ. ಸ್ಥಳಿಯಾಡಳಿತ ಸಂಸ್ಥೆಗಳ ಯೋಜನಾ ಮೊತ್ತ ಕಡಿತಗೊಳಿಸುವ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆ ಬುಡಮೇಲುಗೊಳಿಸುವ ಷಡ್ಯಂತ್ರ ಎಡರಂಗ ಸರ್ಕಾರದ್ದಾಗಿದೆ ಎಂದು ಅವರು ಆಪಾದಿಸಿದರು. ಎಡರಂಗ ಸರಕಾರದ ಜನದ್ರೋಹ ನೀತಿಯಿಂದ ಗ್ರಾಮ ಪಂಚಾಯತುಗಳಿಗೆ ಕೋಟ್ಯಾಂತರ ರೂ.ಮೊತ್ತದ ಯೋಜನೆ ನಷ್ಟವಾಗಿದೆ. ಕೋವಿಡ್ ನೆಪದಲ್ಲಿ ಕೋಟ್ಯಾಂತರ ರೂ.ಕೊಳ್ಳೆಹೊಡೆದ ಎಡರಂಗ ಸರ್ಕಾರ ಭ್ರಷ್ಟಾಚಾರದಲ್ಲಿ ತಾಂಡವಾಡುತ್ತಿದೆಯೆಂದರು.
ಧರಣಿಯಲ್ಲಿ ಮಂಡಲ ಕಾಂಗ್ರೆಸ್ ಅಧ್ಯಕ್ಷ ಸತ್ಯನ್.ಸಿ.ಉಪ್ಪಳ ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ಪಿ.ಎಂ.ಖಾದರ್, ರಶೀದ್ ಮಾಸ್ತರ್, ಮಹಾರಾಜ, ಹುಸೈನ್ ಬೇಕೂರು, ಮನ್ಸೂರ್ ಕಂಡತ್ತಿಲ್, ಪ್ರದೀಪ್ ಶೆಟ್ಟಿ, ಮೊಹಮ್ಮದ್ ಸೀಗಂದಡಿ, ಬಾಬು ಬಂದ್ಯೋಡು, ಚಂದ್ರಶೇಖರ ಐಲ, ಮೊಯಿದ್ದೀನ್ ಬಸರಾ, ಅಶ್ರಫ್ ಸೀಗಂದಡಿ ಮುಂತಾದವರು ಉಪಸ್ಥಿತರಿದ್ದರು.





