HEALTH TIPS

ಕಾಸರಗೋಡು ಚಿನ್ನರ ತ್ರಿಭಾಷಾ ರಂಗ ನಾಟಕ ಕೃತಿ ಬಿಡುಗಡೆ-ಭಾಷಾಂತರ, ಭಾವಾನುವಾದ ಸುಲಭದ ಕೆಲಸವಲ್ಲ : ರವೀಂದ್ರ ಜೋಷಿ


          ಕಾಸರಗೋಡು:  ಭಾಷಾಂತರ, ಭಾವಾನುವಾದ ಸುಲಭದ ಕೆಲಸವಲ್ಲ. ಹೊಸದನ್ನು ಹೊಸೆಯಬಹುದು. ಒಂದು ಭಾಷೆಯ ಕೃತಿಯನ್ನು ಯಥಾವತ್ ಮತ್ತೊಂದು ಭಾಷೆಗೆ ಅದೂ ಏಕ ಕಾಲಕ್ಕೆ ಮೂರು ಭಾಷೆಗಳಿಗೆ ತರ್ಜುಮೆ ಮಾಡುವುದು ಎಂಥವರಿಗೂ ದುಸ್ತರ ಎಂದು ಮಾಧ್ಯಮ ವೆಬ್ ಚಾನಲ್ ಸಂಪಾದಕ ರವೀಂದ್ರ ಜೋಷಿ ಅವರು ಹೇಳಿದರು. 

          ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ, ನಟ, ರಂಗಕರ್ಮಿ ಕಾಸರಗೋಡು ಚಿನ್ನಾ ಅವರ ತ್ರಿಭಾಷಾ ರಂಗ ನಾಟಕಗಳು ಕೃತಿಯನ್ನು ಇತ್ತೀಚೆಗೆ ಕಾಸರಗೋಡಿನಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. 

       ಲಾಕ್ ಡೌನ್ ಸಂದರ್ಭದಲ್ಲಿ ಹೊರಗೆ ಹೋಗಲಾಗದಿದ್ದರೆ ಒಳಗೆ ಹೋಗು ಎಂದು ದೊಡ್ಡವರು ಹೇಳಿದ್ದಾರೆ. ಹಾಗೆ ಎರಡು ತಿಂಗಳುಗಳ ಕಾಲ ಇತರರು ಏನು ಮಾಡಿದರೋ ಗೊತ್ತಿಲ್ಲ. ಕಾಸರಗೋಡು ಚಿನ್ನಾ ಮಾತ್ರ ಅನಘ್ರ್ಯ ರತ್ನವನ್ನು ಸಾರಸ್ವತ ಲೋಕಕ್ಕೆ ನೀಡಿದ್ದಾರೆಂದರು. ಅಸಾಧ್ಯವಾದುದನ್ನೇ ಸಾಧುವಾಗಿಸುವುದು ಚಿನ್ನಾ ಅವರ ಗುಣ ವಿಶೇಷ. ರಂಗ ನಿರ್ದೇಶನ, ನಟನೆ, ಸಾಹಿತ್ಯ, ಸಂಘಟನೆ ಹೀಗೆ ಕೈಯಾಡಿಸಿದ ಕ್ಷೇತ್ರದಲ್ಲೆಲ್ಲ ಅಪ್ರತಿಮ ಛಾಪು ಮೂಡಿಸಿದ ಅವರು ಈ ಹಿಂದೆ ಆಯೋಜಿಸಿದ ಲಾರಿ ನಾಟಕ, ಯಕ್ಷತೇರು, ಸಂಗೀತ ರಥ, ಮೂಕಾಭಿನಯ ಮೊದಲಾದ ಅಭಿಯಾನಗಳು ಹೊಸ ದಾಖಲೆಗಳನ್ನೇ ನಿರ್ಮಿಸಿತು ಎಂದರು. 

        ಕಾಸರಗೋಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಹಿರಿಯ ವೈದ್ಯ, ಧಾರ್ಮಿಕ ಹಾಗು ಸಾಮಾಜಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಡಾ.ಅನಂತ ಕಾಮತ್ ಅವರು ಶುಭಹಾರೈಸಿ ಮಾತನಾಡಿದರು. 

       ಲೇಖಕಿ, ಮಂಗಳೂರು ಆಕಾಶವಾಣಿ ಉದ್ಘೋಷಕಿ ಅಕ್ಷತಾ ರಾಜ್ ಪೆರ್ಲ ಅವರು ಕೃತಿಯ ಪರಿಚಯ ನೀಡಿದರು. ಚಿನ್ನಾ ಅವರು ತಮ್ಮ ಅಟ್ಟಣೆ ಮತ್ತು ಒರಿಯೆ ನನೊರಿಯೆ ತುಳು ತರ್ಜುಮೆಗಳ ಮೂಲಕ ತುಳುವಿಗೆ ಅಸಂಗತ ನಾಟಕಗಳನ್ನು ನೀಡಿದ್ದಾರೆ. ಸದಾ ತನ್ನ ಕ್ರಿಯಾಶೀಲತೆಯಿಂದ, ಪ್ರಯೋಗಶೀಲತೆಯಿಂದ ಕಾಸರಗೋಡು ರಂಗಭೂಮಿ ಸಹಿತ ಸಾಂಸ್ಕøತಿಕ ಲೋಕಕ್ಕೆ ಹೊಸ ಹೊಳಹನ್ನು ನೀಡಿದ್ದಾರೆ ಎಂದರು. 

       ಪ್ರಶಸ್ತಿ ವಿಜೇತ ಅಧ್ಯಾಪಕ, ನಾಟಕಕಾರ, ಚಿಂತಕ ನಿರ್ಮಲ್ ಕುಮಾರ್ ಕಾರಡ್ಕ ಅವರು ಮಾತನಾಡಿ ಕಾಸರಗೋಡು ಚಿನ್ನಾ ಸಾಂಸ್ಕøತಿಕ ಲೋಕಕ್ಕೆ ನೀಡಿರುವ ಮಹತ್ವದ ಕೊಡುಗೆ ಅವಿಸ್ಮರಣೀಯ ಎಂದರು. 

      ಕನ್ನಡದ ಸಿದ್ಧತೆ ಮತ್ತು ಮಲಯಾಳದ ಗುಡ್‍ನೈಟ್ ಎಂಬೀ ಎರಡು ನಾಟಕಗಳನ್ನು ತುಳು, ಕೊಂಕಣಿ ಮತ್ತು ಕನ್ನಡ ಭಾಷೆಗೆ ಭಾಷಾಂತರಿಸಿದ ತ್ರಿಭಾಷಾ ರಂಗ ನಾಟಕಗಳು ಅಪರೂಪದ ಕೃತಿಯಾಗಿವೆ. ಈ ಕೃತಿಯನ್ನು ನೀಡಿದ ಕಾಸರಗೋಡು ಚಿನ್ನಾ ಅವರು ಮಾತನಾಡಿ ಕಾಸರಗೋಡಿನ ಬಹುಭಾಷಾ ಸಂಸ್ಕøತಿ ಈ ಕೃತಿಗಳು ಜನ್ಮ ಪಡೆಯಲು ಕಾರಣವಾಗಿದೆ. ಬಹುಭಾಷಿಗರು ಇಲ್ಲಿ ಸೌಹಾರ್ದತೆಯಿಂದ ಬಾಳ ಬೇಕಾದವರು. ಭಾಷಾ ದ್ವೇಷ ಬೇಕಾಗಿಲ್ಲ. ಇಲ್ಲಿನ ಬಹುಭಾಷೆ, ಸಂಸ್ಕøತಿ, ಸಾಹಿತ್ಯವನ್ನು ಜೊತೆಯಾಗಿ ಸೇರಿ ಕಾಪಿಡೋಣ ಎಂದು ಅವರು ಹೇಳಿದರು. 

      ನಾಗೇಶ್ ತೆರುವತ್ ಕಾರ್ಯಕ್ರಮ ನಿರೂಪಿಸಿದರು. ರಂಗಚಿನ್ನಾರಿ ಕಾಸರಗೋಡು ಸಂಸ್ಥೆಯ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ಅವರು ಸ್ವಾಗತಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries