ಕಾಸರಗೋಡು: ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡಡುಕೊಳ್ಳುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆ ಸದಾ ವಿನೂತನ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ. ಮಧ್ಯವರ್ತಿಗಳಿಲ್ಲದೆ ಉತ್ತಮ ಗುಣಮಟ್ಟದ ಕೃಷಿ ಉತ್ಪನ್ನಗಳನ್ನು ಕೃಷಿಕರು ನೇರವಾಗಿ ಗ್ರಾಹಕರಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಈ ಯತ್ನಗಳು ಮುಂದುವರಿಯುತ್ತಿವೆ.
ಇದರ ಅಂಗವಾಗಿ ಮೊಬೈಲ್ ಆಪ್ ಒಂದು ಸಿದ್ಧವಾಗಿದೆ. ಸುಭಿಕ್ಷ ಕೆ.ಎಸ್.ಡಿ. ಎಂಬ ಹೆಸರಿನ ಈ ಆಪ್ ಶೀಘ್ರದಲ್ಲೇ ಅನಾವರಣಗೊಳ್ಳಲಿದೆ. ಸುಭಿಕ್ಷ ಆಪ್ ಜಾರಿಗೊಳ್ಳುವ ಮೂಲಕ ಜಿ.ಪಿ.ಎಸ್. ಸೌಲಭ್ಯ ಬಳಸಿ ಗ್ರಾಹಕರು ನೇರವಾಗಿ ಕೃಷಿಕರಿಂದ ತರಕಾರಿ ಸಹಿತ ಕೃಷಿ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಅಧ್ಯಕ್ಷರಾಗಿರುವ ಸುಭಿಕ್ಷ ಕೇರಳಂ ಕೋರ್ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಆಸಕ್ತ ಹಾಲು ಉತ್ಪಾದಕ ಸಂಘಗಳು ಸ್ಥಳೀಯ ಕೃಷಿಕರಿಂದ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ನಡೆಸುವ ಯೋಜನೆ ಬಗ್ಗೆ ಸಭೆಯಲ್ಲಿ ಮಾತುಕತೆ ನಡೆಸಲಾಯಿತು. ಓಲಾಟ್ ಎಂಬಲ್ಲಿ ಈ ಸಂಬಂಧ ಸ್ಟಾಲ್ ಒಂದನ್ನು ಜಿಲ್ಲಾಧಿಕಾರಿ ಉದ್ಘಾಟಿಸಿರುವುದು ಈ ಕುರಿತಾದ ಆರಂಭವಾಗಿದೆ ಎಂದು ಸಭೆ ತಿಳಿಸಿದೆ.
ರಾಜ್ಯದಲ್ಲೇ ಪ್ರಥಮ ಬಾರಿಗೆ ಜಿಲ್ಲಾಡಳಿತೆಯೊಂದು ನೇರವಾಗಿ ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಕಾಸರಗೋಡು ಜಿಲ್ಲೆಯ 6 ಬ್ಲೋಕ್ ಪಂಚಾಯತ್ ಗಳಲ್ಲೂ ಕೃಷಿಕೋತ್ಪಾದಕ ಕಂಪನಿಗಳನ್ನು ರಚಿಸಲಾಗುವುದು. ಮೊದಲ ಹಂತದಲ್ಲಿ ಪರಪ್ಪ, ನೀಲೇಶ್ವರ, ಕಾಞಂಗಾಡ್ ಪ್ರದೇಶಗಳಲ್ಲಿ ಪಾರ್ಮರ್ಸ್ ಪೆÇ್ರಡ್ಯೂಸರ್ಸ್ ಕಂಪನಿ ರಚಿಸಲಾಗುವುದು. ಪರಪ್ಪದಲ್ಲಿ 10 ಎಕ್ರೆ ಜಾಗದಲ್ಲಿ ಹಣ್ಣು, ತರಕಾರಿ ರಖಂ ಮಾರುಕಟ್ಟೆ ಆರಂಭಿಸಲಾಗುವುದು. ಸಾಮಾನ್ಯ ಜನತೆಯ ಬದುಕಿಗೆ ಅಗತ್ಯವಿರುವ ಎಲ್ಲ ವಿಚಾರಗಳನ್ನೂ ಕೃಷಿ ವಲಯ ಮೂಲಕ ಕಂಡುಕೊಳ್ಳುವ ವಿಶಾಲ ದೃಷ್ಟಿಕೋನದೊಂದಿಗೆ ಕೃಷಿ, ಪಶುಸಂಗೋಪನೆ, ಮೀನು ಸಾಕಣೆ, ಹಾಲು ಉತ್ಪಾದನೆಇತ್ಯಾದಿ ವಲಯಗಳನ್ನು ಏಕೀಕರಣಗೊಳಿಸಿ ಸುಭಿಕ್ಷ ಕೇರಳಂ ಯೋಜನೆಯನ್ನು ಕಾಸರಗೋಡು ಜಿಲ್ಲೆಯಲ್ಲಿ ಜಾರಿಗೊಳಿಸಲಾಗುವುದು.
ಜಿಲ್ಲಾಡಳಿತೆ, ಕೃಷಿಕ ಕಲ್ಯಾಣ-ಕೃಷಿ ಅಭಿವೃದ್ಧಿ ಇಲಾಖೆ, ಸಹಕಾರಿ ಇಲಾಖೆ, ರಾಷ್ಟ್ರೀಯ ಗ್ರಾಮೀಣ ನೌಕರಿ ಖಾತರಿ ಯೋಜನೆ, ಸ್ಥಳೀಯಾಡಳಿತೆ ಇಲಾಖೆ, ಹರಿತ ಕೇರಳಂ ಮಿಷನ್ ಜಂಟಿ ವತಿಯಿಂದ ಯೋಜನೆ ಜಾರಿಗೊಳಿಸುತ್ತಿವೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನ ಸಹಾಯದೊಂದಿಗೆ 1285.86 ಹೆಕ್ಟೇರ್ ಬಂಜರು ಜಾಗವನ್ನು ಸುಭಿಕ್ಷ ಕೇರಳಂ ಯೋಜನೆಯ ಅಂಗವಾಗಿ ಕೃಷಿ ಇಲಾಖೆ ಪತ್ತೆಮಾಡಿ ಅಪೆÇ್ಲೀಡ್ ನಡೆಸಿದೆ. ಇದರಲ್ಲಿ 1070.5 ಹೆಕ್ಟೇರ್ ಜಾಗದಲ್ಲಿ ಈಗಾಗಲೇ ಕೃಷಿ ನಡೆಸಲಾಗಿದೆ. 499.33 ಹೆಕ್ಟರ್ ಜಾಗದಲ್ಲಿ ಭತ್ತದ ಕೃಷಿ, 72 ಹೆಕ್ಟೇರ್ ಜಾಗದಲ್ಲಿ ತರಕಾರಿ ಕೃಷಿ ನಡೆಸಲಾಗುತ್ತಿದೆ. 330 ಹೆಕ್ಟೇರ್ ನಲ್ಲಿ ಗೆಡ್ಡೆ ಕೃಷಿ ನಡೆಯುತ್ತಿದೆ.
ಪಶುಸಂಗೋಪನೆ ಇಲಾಖೆಯ ನೇತೃತ್ವದಲ್ಲಿ ಕುಂಬಳೆಯ ಅಂಬಿಲಡ್ಕದಲ್ಲಿ ಕಾಸರಗೋಡು ಜಿಲ್ಲೆಯ ಗಿಡ್ಡ ತಳಿ ಹಸು ಸಂರಕ್ಷಣೆ ಯೋಜನೆ ಜಾರಿಗೆ ರೂಪುರೇಷೆ ಸಿದ್ಧಪಡಿಸಲಾಗಿದೆ. ನ್ಯಾಷನಲ್ ಕೌ ಸಕ್ರ್ಯೂಟ್ ನಲ್ಲಿ ಅಳವಡಿಸಿ ಈ ಯೋಜನೆ ಜಾರಿಗೊಳ್ಳಲಿದೆ.
ಸಿಹಿ ನೀರಿನಲ್ಲಿ ಮೀನು ಸಾಕಣೆ ಕ್ಷೇತ್ರದಲ್ಲೂ ಕಾಸರಗೋಡು ಮುನ್ನಡೆ ಸಾಧಿಸುತ್ತಿದೆ. 9.5 ಹೆಕ್ಟೇರ್ ಜಾಗದ ಜಲಾಶಯಗಳಲ್ಲಿ ಮೀನು ಮರಿಗಳ ಹೂಡಿಕೆ ನಡೆಸಲಾಗಿದೆ. 74 ಕೆರೆಗಳು, 39 ಬಯೋ ಫ್ಲಾಕ್ ಗಳನ್ನೂ ನಿರ್ಮಿಸಲಾಗಿದೆ ಎಂದು ಸಭೆ ತಿಳಿಸಿದೆ.
ಆನ್ ಲೈನ್ ಮೂಲಕ ನಡೆದ ಸುಭಿಕ್ಷ ಕೇರಳಂ ಕೋರ್ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಪ್ರಧಾನ ಕೃಷಿ ಅಧಿಕಾರಿ ಸಾವಿತ್ರಿ, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್, ಮೀನುಗಾರಿಕೆ ಇಲಾಖೆ ಡಿ.ಡಿ. ಪಿ.ವಿ. ಸತೀಶನ್, ಪಂಚಾಯತ್ ಡಿ.ಡಿ. ಜೈಸನ್, ಪಶುಸಂಗೋಪನೆ ಇಲಾಖೆ ಡಿ.ಡಿ. ಮಹೇಶ್, ಬಡತನ ನಿವಾರಣೆ ವಿಭಾಗ ಯೋಜನೆ ಪ್ರಬಂಧಕ ಕೆ.ಪ್ರದೀಪನ್, ಸಿ.ಪಿ.ಸಿ.ಆರ್.ಐ. ಪ್ರಧಾನ ವಿಜ್ಞಾನಿ ಮತ್ತು ದಾಖಲೀಕರಣಕ್ಕೆ ನೇತೃತ್ವ ವಹಿಸುತ್ತಿರುವ ಡಾ.ಸಿ.ತಂಬಾನ್ , ಸಂಪನ್ಮೂಲ ವ್ಯಕ್ತಿ ನೀತೂ ಉಪಸ್ಥಿತರಿದ್ದರು.





