ಕಾಸರಗೋಡು: ಕೋವಿಡ್ ಅವಧಿಯಲ್ಲಿ ಸಂಕಷ್ಟ ಅನುಭವಿಸುವ ಮಂದಿಗೆ ವರದಾನ ರೂಪದಲ್ಲಿ ಬೆಲೆ ಕಡಿತ, ಅತ್ಯುತ್ತಮ ಉತ್ಪನ್ನಗಳೊಂದಿಗೆ ಜನಪರ ನ್ಯಾಯ ಬೆಲೆ ಅಂಗಡಿಯಾಗಿರುವ ಮಾವೇಲಿ ಸ್ಟೋರ್ ಪುತ್ತಿಗೆ ಗ್ರಾಮ ಪಂಚಾಯತ್ ನ ಸೀತಾಂಗೋಳಿಯಲ್ಲಿ ನಿನ್ನೆ ಆರಂಭಗೊಂಡಿದೆ.
ಆಹಾರ ಧಾನ್ಯಗಳು ಸಬ್ಸಿಡಿ ದರದಲ್ಲೂ, ಇತರ ಬ್ರಾಂಡೆಡ್ ಉತ್ಪನ್ನಗಳು ಶೇ 5ರಿಂದ ಶೇ 30 ವರೆಗಿಒನ ಬೆಲೆ ಕಡಿತದಲ್ಲಿ ಇಲ್ಲಿ ಮಾರಾಟಗೊಳ್ಳಲಿವೆ. ಕೋವಿಡ್ 19 ಪ್ರತಿರೋಧ ಸಂಹಿತೆಗಳನ್ನು ಕಡ್ಡಾಯವಾಗಿ ಪಾಲಿಸಿ ಮಾವೇಲಿ ಸ್ಟೋರ್ ಚಟುವಟಿಕೆ ನಡೆಸಲಿದೆ. ಗ್ರಾಹಕರು ಕಡ್ಡಾಯವಾಗಿ ಕಟ್ಟುನಿಟ್ಟುಗಳನ್ನು ಪಾಲಿಸಬೇಕು. ಏಕಕಾಲಕ್ಕೆ ನಿಗದಿ ಪಡಿಸಲಾದ ಸಂಖ್ಯೆಯಲ್ಲಿ ಮಾತ್ರ ಜನ ಅಂಗಡಿಯೊಳಗೆ ಪ್ರವೇಶ ಮಾಡಬೇಕು ಎಂದು ತಿಳಿಸಲಾಗಿದೆ.
ಸಿವಿಲ್ ಸಪ್ಲೈಸ್ ನಿಗಮ ವತಿಯಿಂದ ಸೀತಾಂಗೋಳಿಯಲ್ಲಿ ಆರಂಭಗೊಂಡಿರುವ ಮಾವೇಲಿ ಸ್ಟೋರ್ ನ್ನು ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದೀನ್ ಉದ್ಘಾಟಿಸಿದರು. ಸಂಸ್ಥೆಗಾಗಿ ಒಂದು ವರ್ಷದ ಅವಧಿಗೆ ಉಚಿತವಾಗಿ ಅಂಗಡಿ ಒದಗಿಸಿರುವ ಅಬ್ದುಲ್ ರಹಮಾನ್ ಅವರನ್ನು ಅಭಿನಂದಿಸಲಾಯಿತು. ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೆ.ಅರುಣಾ ಅಧ್ಯಕ್ಷತೆ ವಹಿಸಿದ್ದರು.
ಸ್ಥಾಯೀ ಸಮಿತಿ ಅಧ್ಯಕ್ಷೆ ಜಯಂತಿ ಮೊದಲ ಮಾರಾಟ ನಡೆಸಿದರು. ಉಪಾಧ್ಯಕ್ಷ ಪಿ.ಬಿ.ಮುಹಮ್ಮದ್, ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾ ಅಮೆಕ್ಕಳ, ಗ್ರಾಮ ಪಂಚಾಯತ್ನ ಇತರ ಸ್ಥಾಯೀ ಸಮಿತಿ ಅಧ್ಯಕ್ಷರಾದ ಚನಿಯ, ವೈ. ಶಾಂತಿ, ವಾರ್ಡ್ ಸದಸ್ಯರಾದ ಅಬ್ದುಲ್ಲ ಮುಗು, ಇ.ಕೆ.ಮುಹಮ್ಮದ್ ಕುಂuಟಿಜeಜಿiಟಿeಜ, ಎಂ. ಉಮ್ಮರ್ ಫೈಝಿ, ವರಪ್ರಸಾದ್, ಎಂ.ಚಂದ್ರ, ಚಂದ್ರಾವತಿ, ಸಫೀಝಾ, ಆನಂದ, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸಪ್ಲೈ ಕೋ ಸಿಬ್ಬಂದಿ, ಸಂಸ್ಥೆಯ ನೌಕರರು ಮೊದಲಾದವರು ಉಪಸ್ಥಿತರಿದ್ದರು.
ಹಾಲು ಉತ್ಪಾದಕರ ಸಂಘಗಳ ಮೂಲಕ ತರಕಾರಿ ಮಾರಾಟ: ಕಾಸರಗೋಡು ಜಿಲ್ಲೆಯ ಕೃಷಿ ರಂಗದಲ್ಲಿ ನೂತನ ಹೆಜ್ಜೆಗಾರಿಕೆ ಕಾಸರಗೋಡು, ಸೆ.12: ಹಾಲು ಉತ್ಪಾದಕರ ಸಂಘಗಳ ಮೂಲಕ ತರಕಾರಿ ಮಾರಾಟ ನಡೆಸುವ ಮೂಲಕ ಕಾಸರಗೋಡು ಜಿಲ್ಲೆಯ ಕೃಷಿ ರಂಗದಲ್ಲಿ ನೂತನ ಹೆಜ್ಜೆಗಾರಿಕೆ ಆರಂಭಗೊಂಡಿದೆ.
ಸುಭಿಕ್ಷ ಕೇರಳಂ ಯೋಜನೆಯ ಮೂಲಕ ಈ ಪ್ರಕ್ರಿಯೆ ಆರಂಭಗೊಂಡಿದ್ದು, ಕೃಷಿಕರು ತಾವು ಬೆಳೆಯುವ ಉತ್ಪನ್ನಗಳಿಗೆ ತಾವೇ ಬೆಲೆ ನಿಗದಿ ಪಡಿಸುವಷ್ಟು ಸ್ವಾವಲಂಬಿಗಳಾಗುವ ಅವಕಾಶ ದೊರೆತಿದೆ. ಮಧ್ಯವರ್ತಿಗಳಿಲ್ಲದೆ, ಗ್ರಾಹಕರು ಮತ್ತು ಕೃಷಿಕರ ನಡುವೆ ನೇರ ವ್ಯವಹಾರ ನಡೆಯಲಿದೆ. ಸ್ಥಳೀಯ ಮಟ್ಟದ ತರಕಾರಿ, ಹಣ್ಣು, ಮೊಟ್ಟೆ ಇತ್ಯಾದಿ ಉತ್ಪನ್ನಗಳಿಗೆ ತಮ್ಮ ಮಟ್ಟದಲ್ಲೇ ಲಾಭದಾಯಕ ಮಾರುಕಟ್ಟೆ ಒದಗಿಸುವಲ್ಲಿ ಹಾಲು ಉತ್ಪಾದಕರ ಸಂಘಗಳು ವೇದಿಕೆಗಳಾಗುತ್ತಿವೆ.
ಇಲ್ಲಿ ನಿಗದಿಗೊಳ್ಳುವ ಬೆಲೆಯ ಪಟ್ಟಿ ಪ್ರಕಟಿಸಿ, ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ನಡೆಸಲಾಗುವುದು. ಗ್ರಾಹಕರಿಗೂ ಕಡಿಮೆ ಬೆಲೆಗೆ ಸ್ಥಳೀಯ ಮಟ್ಟದಲ್ಲಿ ಬೆಳೆಯುವ ಉತ್ಪನ್ನಗಳು ಲಭಿಸುತ್ತವೆ. ಸಾದಾರಣ ಗತಿಯಲ್ಲಿ ಸಂತೆಗಳಲ್ಲಿ ಮಾರಾಟಗೊಳ್ಳುವ ಕೃಷಿ ಉತ್ಪನ್ನಗಳಿಗೆ ಶೇ 90 ಬೆಲೆ ಕೃಷಿಕರಿಗೆ ಲಭಿಸುತ್ತದೆ. ಆದರೆ ಮಾರಾಟಗೊಳ್ಳದೇ ಉಳಿಯುವ ಉತ್ಪನ್ನಗಳನ್ನು ಕೃಷಿಕರು ಮರಳಿ ಒಯ್ಯಬೇಕಾಗುತ್ತದೆ. ಇದೇ ವೇಳೆ ಹಾಲು ಉತ್ಪಾದಕರ ಸಂಘಗಳು ಕೇವಲ ಕೃಷಿಕರಿಂದ ಮಾತ್ರ ಉತ್ಪನ್ನಗಳನ್ನು ಸ್ವೀಕರಿಸುತ್ತವೆ.
ಈ ಕ್ರಾಂತಿಕಾರಿ ಬೆಳವಣಿಗೆಯ ಮೊದಲ ಹೆಜ್ಜೆಗಾರಿಕೆ ಕಾಸರಗೋಡು ಜಿಲ್ಲೆಯ ಓಲಾಟ್ ಹಾಲು ಉತ್ಪಾದಕರ ಸಂಘದಲ್ಲಿ ನಡೆದಿದೆ. ಸ್ಥಳೀಯ ಉತ್ಪನ್ನಗಳಾದ ಸೊಪ್ಪುಗಳು, ಪಪ್ಪಾಯ, ಬದನೆ, ಬಾಳೆಕಾಯಿ ಇತ್ಯಾದಿ ತರಕಾರಿಗಳು, ಗಾಂಧಾರಿ ಮೆಣಸು, ಮೊಟ್ಟೆ, ತೆಂಗಿನಕಾಯಿ ಸಹಿತ ಉತ್ಪನ್ನಗಳ ಸ್ಟಾಲ್ ಇಲ್ಲಿ ಆರಂಭಗೊಂಡಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಕೃಷಿ ಉತ್ಪನ್ನಗಳ ಮಾರಾಟ ಸ್ಟಾಲ್ ಗೆ ಚಾಲನೆ ನೀಡಿದರು. ಈ ಯೋಜನೆ ಜಿಲ್ಲೆಯ ಹೆಚ್ಚುವರಿ ಹಾಲು ಉತ್ಪಾದಕರ ಸಂಘಗಳಿಗೆ ಶೀಘ್ರದಲ್ಲೇ ವಿಸ್ತಾರಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಈ ವೇಳೆ ತಿಳಿಸಿದರು.





