ಕಾಸರಗೋಡು: ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಮಂಗಳವಾರ ನಾಡಿಗೆ ಸಮರ್ಪಿಸಿದ ಕಾಸ್ರೋಡ್ ಕೆಫೆ ಹೊಸ ಯೋಜನೆ ಏನೆಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ವಿಶೇಷ ಕಾಳಜಿಯಿಂದ ಡಿ.ಟಿ.ಪಿ.ಸಿ.ಯ ನೇತೃತ್ವದಲ್ಲಿ ಈ ವಿಶ್ರಾಂತಿ ಕೇಂದ್ರ ನಿರ್ಮಾಣಗೊಂಡಿದೆ. 1.24 ಕೋಟಿ ರೂ. ವೆಚ್ಚದಲ್ಲಿ ಈ ಕೇಂದ್ರ ನಿರ್ಮಾಣವಾಗಿದೆ. ಯೋಜನೆ ಜಾರಿಗಾಗಿ 50 ಸೆಂಟ್ಸ್ ಜಾಗವನ್ನು ಕಂದಾಯ ಇಲಾಖೆ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಿತ್ತು. ನಂತರ ಪ್ರವಾಸೋದ್ಯಮ ಇಲಾಖೆಯಿಂದ 99.18 ಲಕ್ಷ ರೂ. ಗೆ ಮಂಜೂರಾತಿ ಲಭಿಸಿತ್ತು. ಇದೇ ವೇಳೆ ಚೆಂಗಳ ಗ್ರಾಮ ಪಂಚಾಯತ್ ವಾರ್ಷಿಕ ಯೋಜನೆಯಲ್ಲಿ ಅಳವಡಿಸಿ 25 ಲಕ್ಷ ರೂ. ಮೀಸಲಿರಿಸಿತ್ತು. ಈ ರೀತಿ ಒಟ್ಟು 1.24 ಕೋಟಿ ರೂ. ವೆಚ್ಚದಲ್ಲಿ ಈ ಕೇಂದ್ರ ನಿರ್ಮಾಣವಾಗಿದೆ.
ಎಲ್ಲ ರೀತಿಯ ಅತ್ಯಧುನಿಕ ಸೌಲಭ್ಯಗಳು ಇಲ್ಲಿವೆ. ವೈಟ್ ಝೋನ್ ನಲ್ಲಿ ಫುಡ್ ಕೋರ್ಟ್, ರೈನ್ ಶೇಲ್ಟರ್ ಇತ್ಯಾದಿಗಳಿವೆ. ರೆಡ್ ಝೋನ್ ನಲ್ಲಿ ಏಕಕಾಲಕ್ಕೆ ನೂರಾರು ಮಂದಿ ಕುಳಿತುಕೊಂಡು ಈಕ್ಷಿಸಬಹುದಾದ ಆಂಫಿ ಥಿಯೇಟರ್, ಬ್ಲಾಕ್ ಝೋನ್ ನಲ್ಲಿ ಮೇಲ್ಛಾವಣಿಯಿರುವ ಕುಳಿತುಕೊಳ್ಳಬಹುದಾದ ವಿಹಾರ ಕೇಂದ್ರ, ಮಕ್ಕಳ ಆಟದ ಉದ್ಯಾನ, ಶೌಚಾಲಯ, ನವೀಕೃತ ಕೆರೆ, ಅದರ ಸುತ್ತು ಕಾಲ್ನಡಿಗೆ ಹಾದಿ ಇತ್ಯಾದಿಗಳಿವೆ. ಯುವಜನಾಂಗದವರಿಗೆ ಸಂವಾದಕ್ಕೆ ವ್ಯವಸ್ಥೆ, ಮುಕ್ತ ಗ್ರಂಥಾಲಯ, ವಿನೋದಕ್ಕೆ ಮೀನು ಹಿಡಿಯುವ ಸೌಲಭ್ಯ ಮೊದಲಾದುವು ಗಮನಸೆಳೆಯುತ್ತವೆ. ಅನೇಕ ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದ ಇಲ್ಲಿನ ಕೆರೆಯನ್ನು ಶುಚಿಗೊಳಿಸಿ, ಮೀನುಗಾರಿಕೆ ಇಲಖೆಯ ಸಹಕಾರದೊಂದಿಗೆ ಮೀನುಮರಿಗಳ ಹೂಡಿಕೆ ನಡೆಸಲಾಗಿದೆ.
ಚೆಂಗಳ ಗ್ರಾಮ ಪಂಚಾಯತ್ ನ ಪಾಣಾರ್ ಕುಳಂ ಕಾಸ್ರೋಡ್ ಕೆಫೆ ವಿಶ್ರಾಂತಿ ಕೇಂದ್ರ ಲೋಕಾರ್ಪಣೆಗೊಂಡಿರುವ ಮೂಲಕ ಈ ಹೆಸರಿನ ಸರಣಿ ಸಂಸ್ಥೆಗಳ ಆರಂಭಕ್ಕೆ ಚುರುಕುತನದ ಹಸುರು ನಿಶಾನೆ ಲಭಿಸಿದೆ.
ರಾಜ್ಯದ ಗಡಿ ತಲಪ್ಪಾಡಿಯಿಂದ ತೊಡಗಿ ಜಿಲ್ಲೆಯ ಗಡಿ ಕಾಲಿಕಡವು ವರೆಗೆ "ಕಾಸ್ರೋಡು ಕೆಫೆ" ಎಂಬ ಬ್ರಾಂಡ್ ಹೆಸರಿನಲ್ಲಿ ಆರಂಭಿಸುವ ಅತ್ಯಾಧುನಿಕ ವಿಶ್ರಾಂತಿ ಕೇಂದ್ರಗಳ ನಿರ್ಮಾಣ ಯೋಜನೆಯ ಅಂಗವಾಗಿ ಇದು ನಡೆಯುತ್ತಿದೆ. ತಲಪ್ಪಾಡಿಯಲ್ಲಿ ಕಳೆದ ವರ್ಷ ಫೆಬ್ರವರಿಯಲ್ಲಿ ಕಾಸ್ರೋಡ್ ಕೆಫೆಯ ಚಟುವಟಿಕೆಗಳನ್ನು ಆರಂಭಿಸಲಾಗಿತ್ತು. ಎರಡನೇ ಸಂಸ್ಥೇಯಾಗಿ ಚೆಂಗಳ ಗ್ರಾಮ ಪಂಚಾಯತ್ ನ ಪಾಣಾರ್ ಕುಳಂನಲ್ಲಿ ಕೇಂದ್ರ ಸ್ಥಾಪನೆಗೊಂಡಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ವಿಶೇಷ ಕಾಳಜಿಯಿಂದ ಡಿ.ಟಿ.ಪಿ.ಸಿ.ಯ ನೇತೃತ್ವದಲ್ಲಿ ಈ ವಿಶ್ರಾಂತಿ ಕೇಂದ್ರ ನಿರ್ಮಾಣ ನಡೆಯುತ್ತಿವೆ.
ಕಾಸರಗೋಡು ಎಂಬುದೇ ಇಲ್ಲಿ ಕಾಸ್ರೋಡ್:
ಕಾಸರಗೋಡನ್ನು ಸ್ಥಳೀಯ ಸೊಗಡಿನೊಂದಿಗೆ "ಕಾಸ್ರೋಡ್" ಎಂದು ಸಂಭೋಧಿಸುವುದು ರೂಢಿ. ಇದನ್ನೇ ಈ ಸಂಸ್ಥೆಗಳ ನಾಮಧೇಯವಾಗಿ ಇರಿಸಲಾಗಿದೆ. ಕುಂಬಳೆ, ಬಟ್ಟತ್ತೂರು, ಪೆರಿಯ, ಚೆಮ್ಮಟ್ಟಂವಯಲ್, ಕಾಲಿಕಡವು ಪ್ರದೇಶಗಳಲ್ಲಿ ಈ ಕೇಂದ್ರಗಳ ನಿರ್ಮಾಣ ಚಟುವಟಿಕೆ ಪ್ರಗತಿಯಲ್ಲಿವೆ. ಈ ವಲಯಗಳ ಸ್ಥಳೀಯ ವಿವಿಧತೆಗಳನ್ನು ಅಳವಡಿಸಿ ಕೆಫೆಗಳು ನಿರ್ಮಾಣಗೊಳ್ಳಲಿವೆ ಎಂದು ಡಿ.ಟಿ.ಪಿ.ಸಿ. ಕಾರ್ಯದರ್ಶಿ ಬಿಜು ರಾಘವನ್ ತಿಳಿಸಿರುವರು.




