ಕಾಸರಗೋಡು: ಕಂದಾಯ ಮತ್ತು ವಸತಿ ಸಚಿವ ಇ.ಚಂದ್ರಶೇಖರನ್ ಅವರು ಜಿಲ್ಲೆಯ ಮೊದಲ ಟೆನಿಸ್ ಕೋರ್ಟ್ ನ್ನು ಮಂಗಳವಾರ ಉದ್ಘಾಟಿಸಿದರು. ಈ ಮೂಲಕ ಹೊಸ ವರ್ಷ ಉಡುಗೊರೆಯಾಗಿ ಜಿಲ್ಲೆಗೆ ಸಮರ್ಪಿಸಲ್ಪಟ್ಟಿತು.
ಜಿಲ್ಲಾ ಕ್ರೀಡಾ ಮಂಡಳಿಯ ಶಿಫಾರಸ್ಸಿನ ಮೇರೆಗೆ ನಾಯ್ಮಾರಮೂಲೆ ಮಾಸ್ಟರ್ ಅಬ್ದುಲ್ಲಾ ಸ್ಮಾರಕ ಮಿನಿ ಕ್ರೀಡಾಂಗಣದ ಈ ನೂತನ ಟೆನ್ನಿಸ್ ಕೋರ್ಟ್ ನಿರ್ಮಿಸಲ್ಪಟ್ಟಿದೆ. ಯುವ ಕ್ರೀಡಾಳುಗಳನ್ನು ಮುನ್ನೆಲೆಗೆ ತರುವ ಮತ್ತು ಪ್ರತಿಭೆಗಳಿಗೆ ಪರಿಣಾಮಕಾರಿ ತರಬೇತಿ ನೀಡುವ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸುತ್ತಿದೆ ಎಂದು ಟೆನ್ನಿಸ್ ಕೋರ್ಟ್ ಉದ್ಘಾಟಿಸಿದ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು. ಕಾಸರಗೋಡಿಗೆ ಇಂತಹದೊಂದು ಟೆನಿಸ್ ಕೋರ್ಟ್ ಆರಂಭಗೊಳ್ಳುವುದಕ್ಕೆ ಅಹರ್ನಿಶಿ ದುಡಿದ ಜಿಲ್ಲಾಧಿಕಾರಿ, ಜನ ಪ್ರತಿನಿಧಿಗಳು ಮತ್ತು ಜಿಲ್ಲಾ ಕ್ರೀಡಾ ಮಂಡಳಿಯನ್ನು ಸಚಿವರು ಶ್ಲಾಘಿಸಿದರು.
ಸಮಾರಂಭದಲ್ಲಿ ಶಾಸಕ ಎನ.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ. ಡಿ ಸಜಿತ್ ಬಾಬು ವರದಿ ಮಂಡಿಸಿದರು. ಸಂಸದ ರಾಜಮೋಹನ್ ಉಣ್ಣಿತ್ತಾನ್, ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಶಾಹಿನಾ ಸಲೀಮ್, ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಪಿ.ಹಬೀಬ್ ರಹಮಾನ್ ಮತ್ತು ಗೇಲ್ ನಿರ್ಮಾಣ ವ್ಯವಸ್ಥಾಪಕ ಆಂಥೋನಿ ಡಿಕ್ರೂಜ್ ಉಪಸ್ಥಿತರಿದ್ದರು.
ಕಂದಾಯ ಇಲಾಖೆಯಡಿ 40 ಸೆಂಟ್ಸ್ ಭೂಮಿಯಲ್ಲಿ ಟೆನ್ನಿಸ್ ಕೋರ್ಟ್ ನಿರ್ಮಾಣಗೊಂಡಿದೆ. ಇದನ್ನು ಜಿಲ್ಲಾ ಟೆನಿಸ್ ಅಕಾಡೆಮಿಗೆ ಮೇಲ್ದರ್ಜೆಗೇರಿಸುವ ಕೆಲಸ ನಡೆಸಲಿದೆ. ನಿರ್ಮಾಣ ಕಾರ್ಯಗಳಿಗಾಗಿ ಗೇಲ್ 5 ಲಕ್ಷ ರೂ.ಗಳ ಸಾಮಾಜಿಕ ಬದ್ಧತೆ ನಿಧಿಯನ್ನು ಒದಗಿಸಿದೆ. ಕೋವಿಡ್ -19 ನಿಬರ್ಂಧಗಳನ್ನು ಹಿಂತೆಗೆದ ಬಳಿಕ ಟೆನಿಸ್ ಕೋರ್ಟ್ ಬೆಳಿಗ್ಗೆ 5.30 ರಿಂದ 9 ರವರೆಗೆ ಮತ್ತು ಸಂಜೆ 7 ರಿಂದ ಮಧ್ಯರಾತ್ರಿ 12 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ. ಗಂಟೆಗೆ 250 ರೂ. ಪ್ರವೇಶ ಶುಲ್ಕ ವಿಧಿಸಲಾಗಿದ್ದು ದಿನವೊಂದಕ್ಕೆ 1000 ರೂ. ಶುಲ್ಕ ವಿಧಿಸಲಾಗುತ್ತದೆ. ಟೆನ್ನಿಸ್ ಕೋರ್ಟ್ ನಲ್ಲಿ ಏಕಕಾಲದಲ್ಲಿ ಎರಡು ಅಥವಾ ನಾಲ್ಕು ಗುಂಪುಗಳಲ್ಲಿ ಆಡಬಹುದಾದಷ್ಟು ಸೌಕರ್ಯ ಹೊಂದಿದೆ. ನಾಲ್ಕು ರಾಕೆಟ್‍ಗಳು ಮತ್ತು ಟೆನಿಸ್ ಬಾಲ್ ನ್ನು 250 ರೂ.ಗೆ ಬಾಡಿಗೆಗೆ ಪಡೆಯಬಹುದು. ನಾಲ್ಕು ಸ್ಥಳಗಳಲ್ಲಿ 9 ಮೀಟರ್ ಎತ್ತರದಲ್ಲಿ ತಲಾ 200 ವ್ಯಾಟ್‍ಗಳ ನಾಲ್ಕು ಫ್ಲಡ್ ಲೈಟ್ ಲ್ಯಾಂಪ್‍ಗಳನ್ನು ಸ್ಥಾಪಿಸಲು ಮತ್ತು ನೆಲದ ನೀರಾವರಿ ಸೇರಿದಂತೆ ಅಕಾಡೆಮಿಗೆ ಉಚಿತ ನೀರು ಮತ್ತು ವಿದ್ಯುತ್ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಉಚಿತ ತರಬೇತಿ:
ಕೋವಿಡ್ ನಿಯಮಗಳ ಮುಕ್ತಾಯದ ಬಳಿಕ ಐದು ಮತ್ತು ಹದಿನೈದು ವರ್ಷದೊಳಗಿನ ಬಿಪಿಎಲ್ ಮಾನದಂಡಗಳ ಮಕ್ಕಳಿಗೆ ಕ್ರೀಡಾ ಮಂಡಳಿಯ ಆಶ್ರಯದಲ್ಲಿ ಉಚಿತ ತರಬೇತಿ ನೀಡಲಾಗುವುದು. ಮೀಸಲಾತಿ ರಹಿತರಿಂದ ನಿಗದಿತ ಶುಲ್ಕವನ್ನು ವಿಧಿಸಲಾಗುತ್ತದೆ. ತರಬೇತಿ ಪ್ರತಿದಿನ ಸಂಜೆ 4 ರಿಂದ ಸಂಜೆ 5.30 ರವರೆಗೆ ಇರುತ್ತದೆ. ಇದಕ್ಕಾಗಿ ತರಬೇತುದಾರರನ್ನು ನೇಮಿಸಲಾಗುವುದು.
ಬೇಸಿಗೆಯಲ್ಲಿ ತಲಾ 50 ವಿದ್ಯಾರ್ಥಿಗಳ ಎರಡು ಬ್ಯಾಚ್‍ಗಳಲ್ಲಾಗಿ ವಿಶೇಷ ತರಬೇತಿ ನೀಡಲಾಗುವುದು. ತಮ್ಮ ಹೆಸರನ್ನು ನೋಂದಾಯಿಸುವ ಮೊದಲ 100 ಮಂದಿಗೆ ವಿಶೇಷ ಅವಕಾಶವಿದೆ. ಕೋಚಿಂಗ್‍ಗೆ ನಿಗದಿತ ಶುಲ್ಕವಿದೆ. ಈ ಪೈಕಿ 20 ನಿರ್ಗತಿಕ ಮಕ್ಕಳಿಗೆ ತರಬೇತಿ ಉಚಿತವಾಗಿರುತ್ತದೆ. ಬೆಳಿಗ್ಗೆ 9 ರಿಂದ 11 ರವರೆಗೆ ಮತ್ತು ಮಧ್ಯಾಹ್ನ 3 ರಿಂದ 4.30 ರವರೆಗೆ ಎರಡು ಬ್ಯಾಚ್‍ಗಳಲ್ಲಿ ತರಬೇತಿ ನೀಡಲಾಗುವುದು. ಕಾರ್ಯಚಟುವಟಿಕೆಗಳನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮೇಲ್ವಿಚಾರಣಾ ಸಮಿತಿಯು ನೋಡಿಕೊಳ್ಳುತ್ತದೆ. ಮತ್ತು ಜಿಲ್ಲಾ ಕ್ರೀಡಾ ಮಂಡಳಿಯ ಅಧ್ಯಕ್ಷರು ಉಸ್ತುವಾರಿ ವಹಿಸುತ್ತಾರೆ. ಟೆನ್ನಿಸ್ ಕೋರ್ಟ್‍ನ ರಕ್ಷಣೆಯ ಜವಾಬ್ದಾರಿ ಜಿಲ್ಲಾ ಟೆನಿಸ್ ಸಂಘದ ಮೇಲ್ವಿಚಾರಣೆಯಲ್ಲಿರಲಿದೆ. ಟೆನಿಸ್ ಕೋರ್ಟ್ ಬಳಿ ಡ್ರೆಸ್ಸಿಂಗ್ ರೂಮ್ ಮತ್ತು ಟಾಯ್ಲೆಟ್ ನಿರ್ಮಿಸಲಾಗುತ್ತಿದೆ. ಕೋರ್ಟ್ ನ ಸುತ್ತಲೂ ಮೂರು ಮೀಟರ್ ಎತ್ತರದ ಮುಳ್ಳುತಂತಿ ಬೇಲಿ ಇರುತ್ತದೆ.
ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷ ಇ.ಶಾಂತಕುಮಾರಿ, ಪಂಚಾಯತ್ ಸದಸ್ಯ ಎನ್.ಎ. ಮೊಹಮ್ಮದ್ ತಾಹಿರ್, ರಾಜ್ಯ ಕ್ರೀಡಾ ಮಂಡಳಿ ಸದಸ್ಯ ಟಿ.ವಿ.ಬಾಲನ್, ಜಿಲ್ಲಾ ಕ್ರೀಡಾ ಮಂಡಳಿ ಉಪಾಧ್ಯಕ್ಷ ಪಿ.ಪಿ.ಅಶೋಕನ್, ಕಾರ್ಯನಿರ್ವಾಹಕ ಸದಸ್ಯ ವಿ.ಪಿ.ಜಾನಕಿ, ಜಿಲ್ಲಾ ಟೆನಿಸ್ ಸಂಘದ ಅಧ್ಯಕ್ಷ ಪಿ.ನಾರಾಯಣನ್ ಮತ್ತು ಕೌನ್ಸಿಲ್ ಕಾರ್ಯದರ್ಶಿ ಉಪಸ್ಥಿತರಿದ್ದರು. ಡಾ. ಇ.ನಸೀಮುದ್ದೀನ್ ಮತ್ತು ಎನ್.ಎ. ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎನ್.ಎ. ಅಬೂಬಕರ್ ಮೊದಲಾದವರೂ ಉಪಸ್ಥಿತರಿದ್ದರು.






