ಕಾಸರಗೋಡು: ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯಾಗಿಸಲು ಶಿಫಾರಸು ಸಲ್ಲಿಸಲಾಗಿದೆ.
ಸೋಮವಾರ ವೀಡಿಯೋ ಕಾನ್ ಫೆರೆನ್ಸ್ ಮೂಲಕ ನಡೆದ ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ಡಾ.ಎ.ವಿ.ರಾಮದಾಸ್ ಈ ಶಿಫಾರಸು ಸಲ್ಲಿಸಿದ್ದಾರೆ.
ಈ ನಿಟ್ಟಿನಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಇತರ ರೋಗಿಗಳನ್ನು ನೀಲೇಶ್ವರ, ಪೆರಿಯ ಆಸ್ಪತ್ರೆಗಳಿಗೆ ಸ್ಥಳಾಂತರಿಸಬಹುದು. ಆದರೆ ಹೆರಿಗೆ ವಿಭಾಗದಲ್ಲಿ ಶಸ್ತ್ರಚಿಕಿತ್ಸೆ ಅಗತ್ಯವಿರುವ ಮಂದಿಗೆ ಪ್ರತ್ಯೇಕ ಆಸ್ಪತ್ರೆಯನ್ನು ಗೊತ್ತುಮಾಡಬೇಕಿದೆ. ಈ ಅಗತ್ಯಕ್ಕಾಗಿ ಸಂಜೀವಿನಿ ಆಸ್ಪತ್ರೆಯ ಶಸ್ತ್ರಚಕಿತ್ಸೆ ಕೊಠಡಿ ಸಹಿತದ ಒಂದು ವಿಭಾಗ ಲಭ್ಯವಾಗಬಹುದೇ ಎಂದು ತಪಾಸಣೆ ನಡೆಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಜಿಲ್ಲಾ ವೈದ್ಯಾಧಿಕಾರಿಗೆ ಆದೇಶ ನೀಡಿದರು.
ಕಂಟೈ ನ್ಮೆಂಟ್ ಅಲ್ಲದೇ ಇರುವ ಎಲ್ಲ ಪ್ರದೇಶಗಳಲ್ಲಿ ಆಟೋ-ಟಾಕ್ಸಿ ನಿಲ್ದಾಣ ಚಟುವಟಿಕೆಗೆ ಮಂಜೂರಾತಿ ನೀಡಿರುವುದಾಗಿ ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದರು.
ಕರ್ನಾಟಕದಿಂದ ಕೇರಳದ ಇತರ ಜಿಲ್ಲೆಗಳ ಪ್ರದೇಶಗಳಿಗೆ ಆಗಮಿಸಿ, ಮರಳಿ ಕರ್ನಾಟಕಕ್ಕೆ ತೆರಳುವ ಬಸ್ ಗಳ ಸಂಚಾರಕ್ಕೆ ಮಂಜೂರಾತಿ ನೀಡುವುದಾಗಿ ಜಿಲ್ಲಾಧಿಕಾರಿ ಹೇಳಿದರು. ಆದರೆ ಈ ಬಸ್ ಗಳು ಕಾಸರಗೋಡು ಜಿಲ್ಲೆಯ ಯಾವುದೇ ಪ್ರದೇಶಗಳಲ್ಲಿ ನಿಲುಗಡೆ ಮಾಡುವುದು, ಪ್ರಯಾಣಿಕರನ್ನು ಹೇರುವುದು, ಇಳಿಸುವುದು ಸಲ್ಲದು ಎಂದವರು ಆದೇಶಿಸಿದರು.
ಕೋವಿಡ್ ಸಂಹಿತೆಗಳು ಇದೇ ರೀತಿ ಮುಂದುವರಿಯುವುದಿದ್ದರೆ ಹತ್ತನೇ ತರಗತಿ, ಪ್ರವೇಶಾತಿ ಪರೀಕ್ಷೆಗಳು ನಡೆಸಿದ ಮಾದರಿಯಲ್ಲೇ ಕಟ್ಟುನಿಟ್ಟು ಪಾಲಿಸಿ ನ.1ರಿಂದ 18 ವರೆಗೆ ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆ ನಡೆಸಲಾಗುವುದು ಎಂದು ಸಭೆ ಅನುಮತಿ ನೀಡಿದೆ.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಉಪಜಿಲ್ಲಾಧಿಕಾರಿ ಡಿ.ಆರ್. ಮೇಘಶ್ರೀ, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ವಲಯ ಕಂದಾಯಾಧಿಕಾರಿ ಷಂಸುದ್ದೀನ್, ಡಿ.ವೈ.ಎಸ್.ಪಿ.ಗಳಾದ ವಿನೋದ್ ಕುಮಾರ್, ಬಾಲಕೃಷ್ಣನ್ ನಾಯರ್, ಜಿಲ್ಲಾ ವಾರ್ತಾಧಿಕಾರಿ ಮಧೂಸೂದನನ್ ಎಂ. ಮೊದಲಾದವರು ಉಪಸ್ಥಿತರಿದ್ದರು.





