ತಿರುವನಂತಪುರ: ಸ್ಥಳೀಯ ಸಂಸ್ಥೆಗಳ ನೂತನ ಚುನಾಯಿತ ಸದಸ್ಯರು ಡಿಸೆಂಬರ್ 21 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗ (ಎಸ್‍ಇಸಿ) ಪ್ರಕಟಿಸಿದೆ.
ನಗರಸಭೆಗಳು ಮತ್ತು ಕಾರ್ಪೋರೇಶನ್ ಗಳ ಅಧ್ಯಕ್ಷರ ಆಯ್ಕೆ ಡಿಸೆಂಬರ್ 28 ರಂದು ಬೆಳಿಗ್ಗೆ 11 ಗಂಟೆಗೆ ಮತ್ತು ಉಪಾಧ್ಯಕ್ಷರಿಗೆ ಅದೇ ದಿನ ಮಧ್ಯಾಹ್ನ 2 ಗಂಟೆಗೆ ಚುನಾವಣೆ ನಡೆಯಲಿದೆ. ತ್ರಿಸ್ಥರ ಪಂಚಾಯಿತಿಗಳ ಅಧ್ಯಕ್ಷರಿಗೆ ಡಿಸೆಂಬರ್ 30 ರಂದು ಬೆಳಿಗ್ಗೆ 11 ಗಂಟೆಗೆ ಮತ್ತು ಉಪಾಧ್ಯಕ್ಷರಿಗೆ ಆ ದಿನ ಮಧ್ಯಾಹ್ನ 2 ಗಂಟೆಗೆ ಚುನಾವಣೆ ನಡೆಯಲಿದೆ.
ಹೊಸ ಸದಸ್ಯರ ಪ್ರಮಾಣ ವಚನ ಸ್ವೀಕರಿಸಲು ಚುನಾವಣಾ ಆಯೋಗವು ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿದೆ. ಪ್ರಮಾಣ ವಚನ ಸ್ವೀಕಾರ ಬೆಳಿಗ್ಗೆ 10 ಗಂಟೆಗೆ ಗ್ರಾಮ ಪಂಚಾಯಿತಿಗಳು, ಬ್ಲಾಕ್ ಪಂಚಾಯಿತಿಗಳು, ಜಿಲ್ಲಾ ಪಂಚಾಯಿತಿಗಳು ಮತ್ತು ನಗರಸಭೆಗಳಲ್ಲಿ ಮತ್ತು ಬೆಳಿಗ್ಗೆ 11.30 ಕ್ಕೆ ಕಾರ್ಪೋರೇಶನ್ ಗಳಲ್ಲಿ ನಡೆಯಲಿದೆ.
ಸಮಾರಂಭಗಳ ಸಮನ್ವಯ ಮತ್ತು ಅನುಷ್ಠಾನದ ಬಗ್ಗೆ ಆಯಾ ಜಿಲ್ಲಾಧಿಕಾರಿಗಳು ಸಾಮಾನ್ಯ ಮೇಲ್ವಿಚಾರಣೆಯನ್ನು ಹೊಂದಿರುತ್ತಾರೆ.
ಎಡರಂಗವು ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಾರೀ ಮುನ್ನಡೆ ಕಂಡಿದೆ. ಯುಡಿಎಫ್‍ಗೆ ದೊಡ್ಡ ಹಿನ್ನಡೆ ಅನುಭವಿಸಿದ್ದು, ಬಿಜೆಪಿ ನಿರೀಕ್ಷಿತ ಸಂಖ್ಯೆಯ ಸ್ಥಾನಗಳನ್ನು ಗೆಲ್ಲುವಲ್ಲಿ ವಿಫಲವಾಗಿದೆ. ಈ ಮಧ್ಯೆ ಹಲವು ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಸಮಬಲದಲ್ಲಿ ಪಕ್ಷಗಳಿದ್ದು ಪ್ರಮಾಣ ವಚನಕ್ಕಿಂತ ಮೊದಲು ಅಂತಿಮ ನಿರ್ಧಾರಗಳನ್ನು ಪ್ರಕಟಿಸುವಂತೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.





