ಕಾಸರಗೋಡು: ಕೋವಿಡ್ ನಿಯಂತ್ರಣದ ಹಿನ್ನೆಲೆಯಲ್ಲಿ ಪೂರಂ, ಕಳಿಯಾಟ ಮಹೋತ್ಸವಗಳ ಸಹಿತ ಅನುಷ್ಟಾನ ಆಚಾರ ಕಲೆಗಳಿಗೆ ಅನುಮತಿ ನಿರಾಕರಿಸದಿರುವಂತೆ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಶ್ರೀಕಾಂತ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಕಳೆದ ಒಂಬತ್ತು ತಿಂಗಳಿಂದಲೂ ಬಹುತೇಕ ಕ್ಷೇತ್ರಗಳಲ್ಲಿ ಆಚಾರಕರ್ಮಗಳನ್ನು ಮಾತ್ರ ನಡೆಸಿಕೊಂಡು ಬರಲಾಗಿದೆ. ಕ್ಷೇತ್ರಗಳನ್ನು ಅವಲಂಬಿಸಿರುವ ವಾದ್ಯಕಲಾವಿದರು, ವ್ಯಾಪಾರಿಗಳು, ಪುರೋಹಿತವರ್ಗದವರು ಸಂಕಷ್ಟ ಅನುಭವಿಸುತ್ತಿದ್ದಾರೆ. ಪರಿಸ್ಥಿತಿ ಸಹಜಸ್ಥಿತಿಗೆ ಮರಳುತ್ತಿದ್ದರೂ, ಕ್ಷೇತ್ರ ಉತ್ಸವಾದಿಗಳಿಗೆ ನಿಯಂತ್ರಣ ಹೇರುತ್ತಿರುವುದು ಖಂಡನೀಯ. ಆರಾಧನಾಲಯಗಳಲ್ಲಿ ಈ ಹಿಂದೆ ಜಾರಿಯಲ್ಲಿದ್ದ ಅನ್ನದಾನಕ್ಕೂ ಅನುಮತಿ ಕಲ್ಪಿಸಬೇಕು.
ಕೇರಳದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ಯುವಜನ ಸಂಘಟನೆಯೊಂದು ಹೊಸ ವರ್ಷಾಚರಣೆ ಸಂದರ್ಭ ರಾಜ್ಯವ್ಯಾಪಕವಾಗಿ ನಡೆಸಿದ ಡಿಜೆ ಪಾರ್ಟಿ ಹಾಗೂ ಸಂಭ್ರಮಾಚರಣೆ ರಾಜ್ಯದ ಕೋವಿಡ್ ಮಾನದಂಡಗಳನ್ನು ಪ್ರಹಸನವಾಗಿಸಿದೆ. ಪ್ರವಾಸಿತಾಣ, ಶಾಲಾ-ಕಾಲೇಜು, ಚಿತ್ರಮಂದಿರ, ಹೋಟೆಲ್‍ಗಳನ್ನು ತೆರೆದುಕಾರ್ಯಾಚರಿಸಲು ಅನುಮತಿ ನೀಡಿರುವ ಸರ್ಕಾರ, ದೇವಾಲಯಗಳಲ್ಲಿ ಉತ್ಸವ ಹಾಗೂ ಅನ್ನದಾನಕ್ಕೆ ತಡೆಯೊಡ್ಡಿರುವುದು ಸರಿಯಲ್ಲ. ಉತ್ಸವಗಳನ್ನು ಅನ್ನದಾನದೊಂದಿಗೆ ಈ ಹಿಂದಿನಂತೆ ನಡೆಸಲು ಅನುಮತಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.




