ಬದಿಯಡ್ಕ: ಪ್ರತಿಯೊಂದು ಸಾಹಿತ್ಯ ಕೃತಿಗಳು ಓದುಗರನ್ನು ಆಕರ್ಷಿಸುವಲ್ಲಿ ಮತ್ತು ಓದಿದ ವಿಚಾರಗಳ ಹೊಸತೊಂದು ಅವಲೋಕನಕ್ಕೆ ಸಾಹಿತ್ಯ ವಿಮರ್ಶೆಗಳು ಎಂದಿಗೂ ಮಹತ್ತರವಾದುದು ಎಂದು ಹಿರಿಯ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪೆರ್ಲದ ಸಾಹಿತ್ತಿಕ, ಸಾಂಸ್ಕøತಿಕ ಸಂಘಟನೆಯಾದ ಸವಿಹೃದಯದ ಕವಿಮಿತ್ರರು ವೇದಿಕೆ ನೇತೃತ್ವದಲ್ಲಿ ಹನುಮಗಿರಿಯ ವೈದೇಹಿ ಸಭಾ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸವಿ ಹೃದಯದ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಸಾಹಿತಿ, ಸಂಘಟಕ ಮಧುರಕಾನನ ಗಣಪತಿ ಭಟ್ ಸಂಪಾದಿಸಿರುವ "ಸವಿಜೇನು" ಕವನ ಸಂಕಲದ ಕೃತಿ ವಿಮರ್ಶೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವುದೇ ಬರಹಗಳ ಓದುವಿಕೆಯು ಒಬ್ಬೊಬ್ಬರಿಗೂ ಪ್ರತ್ಯೇಕ ಅನುಭೂತಿಗಳನ್ನು ನೀಡಬಹುದು. ಪ್ರತಿಯೊಬ್ಬರ ಅನುಭವ, ಅರಿವು, ಗ್ರಹಣಾ ಸಾಮಥ್ರ್ಯದ ಅನುಸಾರ ಬರಹಗಳು ಅರ್ಥೈಸಲ್ಪಡುತ್ತದೆ. ಈ ಹಿನ್ನೆಲೆಯಲ್ಲಿ ಕೃತಿಗಳ ಅವಲೋಕನ-ವಿಮರ್ಶೆಗಳು ಹೊಸತಾದ ಹೊಳಹುಗಳನ್ನು ಓದುಗನಿಗೆ ನೀಡಬಲ್ಲದು. ಎಲ್ಲಾ ಕಾಲಕ್ಕೂ ಸಲ್ಲುವ ಬರಹಗಳು ಎಂದಿಗೂ ಓದುಗನ ಮನಃಪಟಲದಲ್ಲಿ ಅಚ್ಚಳಿಯದೆ ಉಳಿಯುವ ಮೂಲಕ ಲೇಖಕನೂ ಶಾಶ್ವತ ಸ್ಥಾನ ಪಡೆಯುತ್ತಾನೆ ಎಂದು ಅವರು ತಿಳಿಸಿದರು.
ಸವಿಜೇನು ಕೃತಿಯ ವಿಮರ್ಶೆ ನಡೆಸಿದ ಸಾಹಿತಿ "ಸಾನು" ಉಬರಡ್ಕ ಅವರು, ಕೃತಿ ಓದುಗನಿಗೆ ಅಚ್ಚರಿ, ಕುತೂಹಲ, ಕಚಗುಳಿ, ಚಿಂತನೆ ಮೊದಲಾದ ಭಾವನೆಗಳನ್ನು ಮೂಡಿಸುವಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿದೆ. ರಾಣಿ ಜೇನುಹುಳಗಳಂತೆ ಕೃತಿ ಸಂಪಾದನೆ ಮಾಡಿದ ಮಧುರಕಾನನ ಗಣಪತಿ ಭಟ್ ಅವರ ಶ್ರಮ ಸ್ತುತ್ಯರ್ಹವಾದುದು ಎಂದು ತಿಳಿಸಿದರು.
ಕೃತಿಯ ಸಂಪಾದಕ ಮಧುರಕಾನನ ಗಣಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಕೃತಿ ಮೂಡಿಬಂದ ಬಗೆಯ ಬಗ್ಗೆ ತಿಳಿಸಿದರು. ಸವಿಹೃದಯದ ಕವಿಮಿತ್ರರು ವೇದಿಕೆಯ ಸಂಚಾಲಕ ಸುಭಾಶ್ ಪೆರ್ಲ ಉಪಸ್ಥಿತರಿದ್ದರು. ಸಂಯೋಜಕ ಪುರುಷೋತ್ತಮ ಭಟ್ ಕೆ ಸ್ವಾಗತಿಸಿ, ವಂದಿಸಿದರು.






