ಕಾಸರಗೋಡು:ಮಂಜೇಶ್ವರದ ನಂದಾರಪದವಿನಿಂದ ಆರಂಭಗೊಂಡು ತಿರುವನಂತಪುರ ವರೆಗೆ ಕೇರಳ ರಾಜ್ಯವನ್ನು ಮಲೆನಾಡು ಪ್ರದೇಶದ ಮೂಲಕ ಜೋಡಿಸುವ ಮಲೆನಾಡು ಹೆದ್ದಾರಿ ಯೋಜನೆಗೆ ಅರಣ್ಯಪ್ರದೇಶದಲ್ಲಿ ಜಾಗಬಿಟ್ಟುಕೊಡಲು ಮುಂದಾಗದ ಅರಣ್ಯ ಇಲಾಖೆ ವಿರುದ್ಧ ಶನಿವಾರ ಕಾಸರಗೋಡಿನಲ್ಲಿ ಕಾಂಗ್ರೆಸ್ ಬಳಾಲ್ ಮಂಡಲ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಅರಣ್ಯಾಧಿಕಾರಿ ಕಚೇರಿಗೆ ನಡೆದ ಮುತ್ತಿಗೆ ಪೂರ್ವಭಾವಿಯಾಗಿ ವಿದ್ಯಾನಗರದಿಮದ ನೂರಾರು ಮಂದಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆ ಕಚೇರಿ ಸನಿಹ ತಲುಪುತ್ತಿದ್ದಂತೆ ಪೊಲೀಸರು ಇವರನ್ನು ತಡೆದಿದ್ದಾರೆ. ಪ್ರತಿಭಟನಾ ಸಭೆಯಲ್ಲಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಬಳಾಲ್ ಗ್ರಾಪಂ ಅಧ್ಯಕ್ಷ, ರಾಜ್ಯ ಕೃಷಿ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜು ಕಟ್ಟಾಕಯಂ ಅಧ್ಯಕ್ಷತೆ ವಹಿಸಿದ್ದರು. ಎಂ.ಪಿ ಜೋಸ್ ಅಲೆಕ್ಸ್ ನೆಡಿಯಕಾಲ, ಜೋಯ್ ಜೋಸೆಫ್, ಸಿಬಿಚ್ಚನ್ ಪುಳಿಂಗಾಲ, ಮೀನಾಕ್ಷಿಬಾಲಕೃಷ್ಣನ್, ಪಿ.ಜಿ ದೇವ್, ಜೋಮಾನ್ ಜೋಸ್, ಶೋಬಿಜೋಸೆಫ್ ಉಪಸ್ಥಿತರಿದ್ದರು.
ಮಲೆನಾಡು ಹೆದ್ದಾರಿ ಹಾದುಹೋಗುವ ಕಳ್ಳಾರ್,ವೆಸ್ಟ್ ಎಳೇರಿ, ಈಸ್ಟ್ ಎಳೇರಿ ಗ್ರಾಪಂ ವ್ಯಾಪ್ತಿಯಿಂದ ನೂರಾರು ಮಂದಿ ಪಾಲ್ಗೊಂಡಿದ್ದರು. ಕೋಯಿಚ್ಚಾಲ್-ಚೆರುಪುಯ ಮುಂತಾದೆಡೆ ರಸ್ತೆ ಹಾದುಹೋಗುತ್ತಿರುವ ಅರಣ್ಯಪ್ರದೇಶದಲ್ಲಿ ಕಾಮಗಾರಿ ಆರಂಭಿಸದೆ ಯೋಜನೆ ನೆನೆಗುದಿಗೆ ಬಿದ್ದಿರುವುದಾಗಿ ಪ್ರತಿಭಟನಾಕಾರರು ಆರೋಪಿಸಿದ್ದಾರೆ.




